‘ಆಳ್ವಾಸ್ ಚಿತ್ರಸಿರಿ’ ರಾಜ್ಯಮಟ್ಟದ ಚಿತ್ರಕಲಾ ಶಿಬಿರಕ್ಕೆ ಚಾಲನೆ
.jpg)
ಮೂಡುಬಿದಿರೆ, ನ.10: ಒಬ್ಬ ಚಿತ್ರ ಕಲಾವಿದ ಬಣ್ಣ ಮತ್ತು ರೇಖೆಗಳ ಮೂಲಕ ಜೀವನದ ವಿವಿಧ ಮಜಲುಗಳನ್ನು ಬಿಂಬಿಸುವ ಶಕ್ತಿಯನ್ನು ಹೊಂದಿದ್ದಾನೆ. ಕಲೆಯ ಬೆಳಕು ನಮ್ಮ ಮನಸ್ಸನ್ನು ಅರಳಿಸುವಂತಾಗಬೇಕು. ಧರ್ಮ, ನಂಬಿಕೆಗಳಿರುವ ಕಲಾವಿದ ದೊಡ್ಡ ಮಟ್ಟದಲ್ಲಿ ಬೆಳೆಯುತ್ತಾನೆ. ಏಕತೆಯನ್ನು ಮೂಡಿಸುವಂತಹ ಕೆಲಸವಾದಾಗ ರಾಷ್ಟ್ರ ಸಮೃದ್ಧವಾಗಿ ಬೆಳೆಯುತ್ತದೆ. ಸಂಸ್ಕೃತಿ ಅಗಾಧವಾಗಿ ಬೆಳೆದಾಗ ದ್ವೇಷ ದೂರವಾಗುತ್ತದೆ ಎಂದು ಮೂಡುಬಿದಿರೆ ಜೈನಮಠದ ಭಟ್ಟಾರಕ ಚಾರುಕೀರ್ತಿ ಪಂಡಿತಾಚರ್ಯವರ್ಯ ಸ್ವಾಮೀಜಿ ಹೇಳಿದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ಪುತ್ತಿಗೆಪದವು ಆಳ್ವಾಸ್ ಪ್ರೌಢಶಾಲಾ ಆವರಣದಲ್ಲಿ ಮೂರು ದಿನಗಳ ಕಾಲ ನಡೆಯಲಿರುವ ಆಳ್ವಾಸ್ ಚಿತ್ರಸಿರಿ 10ನೆ ವರ್ಷದ ರಾಜ್ಯಮಟ್ಟದ ಚಿತ್ರಕಲಾ ಶಿಬಿರಕ್ಕೆ ಗುರುವಾರ ಚಾಲನೆ ನೀಡಿ ಆಶೀರ್ವಚನ ನೀಡಿದರು.
ಹೃದಯ ಶ್ರೀಮಂತಿಕೆ ಇರುವ ಮೋಹನ ಆಳ್ವರ ವ್ಯಕ್ತಿತ್ವದಿಂದಾಗಿ ಮೂಡುಬಿದಿರೆ ಸಂಸ್ಕೃತಿಯ ಕಾಶಿಯಾಗಿದೆ. ಚೇತೋಹಾರಿಯಾದ ಮನಸ್ಥಿತಿಯಿದ್ದವರು ಮಾತ್ರ ಸಂಸ್ಕೃತಿಯನ್ನು ಬೆಳೆಸಲು ಸಾಧ್ಯ. ಕಲಾವಿದರು ಭಿನ್ನತೆಯನ್ನು ಸೃಷ್ಟಿಸದೆ, ಏಕತೆಯನ್ನು ಕಲೆಯ ಮೂಲಕ ಮೂಡಿಸಬೇಕು ಎಂದರು. ಉಡುಪಿ ಸಾಯಿರಾಧಾ ಗ್ರೂಪ್ಸ್‌ನ ಮನೋಹರ ಶೆಟ್ಟಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಆಳ್ವಾಸ್ ಬಿ.ವಿ.ಎ ವಿಭಾಗದ ವಿದ್ಯಾರ್ಥಿಗಳ ಮಾಸಿಕ ಸಂಚಿಕೆಯನ್ನು ಬಿಡುಗಡೆಗೊಳಿಸಿದರು.
ಡಾ.ಮೋಹನ ಆಳ್ವರ ವಿಭಿನ್ನ ಪ್ರಯತ್ನಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮತ್ತಷ್ಟು ಪ್ರಸಿದ್ಧಿಯಾಗಬೇಕು. ಇದರಿಂದ ಮೂಡುಬಿದಿರೆ ಮಾತ್ರವಲ್ಲ, ಇಡೀ ದೇಶಿಯ ಕಲೆ, ಸಂಸ್ಕೃತಿ ಜಗಜ್ಜಾಹೀರಾಗುತ್ತದೆ ಎಂದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಸಮಾರಂಭದ ಅಧ್ಯಕ್ಷತೆ ವಹಿಸಿ ಚಿತ್ರಕಲೆಗೆ ಬೇಕಾದ ಪರಿಕರಗಳನ್ನು ಕಲಾವಿದರಿಗೆ ವಿತರಿಸಿದರು.
ಚಿತ್ರವನ್ನು ನೋಡುವ ಕಣ್ಣು, ಅರ್ಥ ಮಾಡಿಕೊಳ್ಳುವ ಮನಸ್ಸಿದ್ದರೆ ಚಿತ್ರ ಸುಂದರವಾಗಿ ಕಾಣುತ್ತದೆ. 2018ರಲ್ಲಿ ವಿಶ್ವನುಡಿಸಿರಿ ವಿರಾಸತ್ ನಡೆಯಲಿದ್ದು, ಆ ಸಂದರ್ಭದಲ್ಲಿ ದೊಡ್ಡ ಮಟ್ಟದಲ್ಲಿ ಚಿತ್ರಕಲಾಶಿಬಿರ ನಡೆಸುವ ಚಿಂತನೆಯಿದೆ ಎಂದರು.
ಶಿಬಿರ ಸಲಹಾ ಸಮಿತಿಯ ಗಣೇಶ್ ಸೋಮಯಾಜಿ ಸ್ವಾಗತಿಸಿದರು. ಪುರುಷೋತ್ತಮ ಅಡ್ವೆ ಉಪಸ್ಥಿತರಿದ್ದರು. ಡಾ.ಯೋಗೀಶ್ ಕೈರೋಡಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.







