ಟಿಪ್ಪು ಸುಲ್ತಾನ್ ಸಹಿಷ್ಣು ರಾಜನಾಗಿದ್ದ: ಮೌಲಾನ ಇಲ್ಯಾಸ್ ನದ್ವಿ

ಭಟ್ಕಳ, ನ.10: ಮೈಸೂರು ಹುಲಿ ಹಝರತ್ ಟಿಪ್ಪು ಸುಲ್ತಾನ್ ಸಹಿಷ್ಣು ರಾಜನಾಗಿದ್ದ ಎಂದು ಮೌಲಾನ ಅಲಿಮಿಯಾ ಅಕಾಡಮಿಯ ಪ್ರಧಾನ ಕಾರ್ಯದರ್ಶಿ ಮೌಲಾನ ಮುಹಮ್ಮದ್ ಇಲ್ಯಾಸ್ ನದ್ವಿ ಹೇಳಿದರು.
ಅವರು ಗುರುವಾರ ಇಲ್ಲಿನ ತರಬಿಯತ್ ಎಜುಕೇಶನ್ ಸೊಸೈಟಿಯ ನ್ಯೂಶಮ್ಸ್ ಸ್ಕೂಲ್ ಶಾಲೆಯಲ್ಲಿ ಆಯೋಜಿಸಿದ್ದ ಹಝರತ್ ಟಿಪ್ಪುಸುಲ್ತಾನ್ ಲೈಫ್ ಮಿಷನ್ ಎಂಬ ವಿಷಯದಲ್ಲಿ ಉಪನ್ಯಾಸ ನೀಡುತ್ತ ಮಾತನಾಡುತ್ತಿದ್ದರು.
ಆಂಗ್ಲರ ಒಡೆದಾಳುವ ನೀತಿ ಹಾಗೂ ತಪ್ಪು ಇತಿಹಾಸ ರಚನೆಯಿಂದಾಗಿ ಇಂದು ಟಿಪ್ಪುವಿನ ಬಗ್ಗೆ ಹಲವು ಆರೋಪಗಳು ಕೇಳಿ ಬರುತ್ತಿದ್ದು ಬ್ರಿಟಿಷರು ರಚಿಸಿದ ಇತಿಹಾಸ ಗೊಂದಲ ಹಾಗೂ ಸುಳ್ಳಿನ ಕಂತೆಯಾಗಿದೆ. ಕೊಡಗಿನಲ್ಲಿ 70ಸಾವಿರ ಜನರನ್ನು ಇಸ್ಲಾಂ ಧರ್ಮಕ್ಕೆ ಮತಾಂತರಿಸಲಾಗಿದೆ, ದೇವಾಲಯಗಳನ್ನು ನಾಶಮಾಡಲಾಗಿದೆ ಎಂಬ ಆರೋಪ ನೈಜತೆಯಿಂದ ಕೂಡಿಲ್ಲ. ಟಿಪ್ಪು ತನ್ನ ರಾಜ್ಯವನ್ನು ವಿಸ್ತರಿಸಲು ಹಿಂದೂಗಳಂತೆ ಮುಸ್ಲಿಮರ ಮೇಲೂ ದಾಳಿ ಮಾಡಿದ್ದಾನೆ. ಶಿವಾಜಿ ಶೃಂಗೇರಿ ಮಂದಿರದ ಮೇಲೆ ದಾಳಿ ಮಾಡಿದ್ದು ರಾಜಕೀಯ ಹಿತಾಸಕ್ತಿಗಾಗಿಯೇ ಹೊರತು ಆತ ಹಿಂದೂ ದ್ರೋಹಿಯಾಗಿದ್ದ ಎನ್ನುವ ಕಾರಣಕ್ಕಾಗಿ ಅಲ್ಲ. ಹಾಗೆಯೇ ರಾಜ-ರಾಜ್ಯಗಳ ಮಧ್ಯೆ ನಡೆಯುವ ಯುದ್ಧಗಳನ್ನು ಮುಂದಿಟ್ಟುಕೊಂಡು ಕೋಮುವಾದಿ ಶಕ್ತಿಗಳು ಧರ್ಮ ಸಹಿಷ್ಣು ರಾಜ ಟಿಪ್ಪು ಸುಲ್ತಾನರನ್ನು ಮತಾಂಧ ಎಂದು ಕರೆಯುತ್ತಿವೆ ಎಂದರು.
ಟಿಪ್ಪುಸುಲ್ತಾನ್ ಭಟ್ಕಳದೊಂದಿಗೆ ಉತ್ತಮ ನಂಟನ್ನು ಹೊಂದಿದ್ದರು. ಅವರ ಕುಟುಂಬಕ್ಕೆ ಸೇರಿದ ಮನೆಯೊಂದು ಈಗಲೂ ಭಟ್ಕಳದಲ್ಲಿ ಇದೆ. ಅವರ ಕಾಲದಲ್ಲಿ ನಿರ್ಮಾಣಗೊಂಡಿರುವ ಮಸೀದಿ ಇಂದಿಗೂ ಸುಲ್ತಾನ್ ಮಸೀದಿ ಎಂಬ ಹೆಸರನ್ನು ಪಡೆದುಕೊಂಡಿದ್ದು, ಆ ಪ್ರದೇಶಕ್ಕೆ ಸುಲ್ತಾನ್ ಸ್ಟ್ರೀಟ್ ಎಂದು ಈಗಲೂ ಕರೆಯಲಾಗುತ್ತಿದೆ ಎಂದರು.
ಟಿಪ್ಪು ಸುಲ್ತಾನ್ ಓರ್ವ ಧಾರ್ಮಿಕ ರಾಜನಾಗಿದ್ದು ಎಲ್ಲರನ್ನು ಪ್ರೀತಿಸುವ, ಸಾಮಾಜಿಕ ನ್ಯಾಯವನ್ನು ಪಾಲಿಸುವವರಾಗಿದ್ದು ಈ ದೇಶಕ್ಕೆ ಕ್ಷಿಪಣಿಯನ್ನು ಪರಿಚಯಿಸಿದ ರಾಜ ಎಂಬ ಬಿರುದಿಗೆ ಖ್ಯಾತರಾದ ಅವರು ಮರಣ ನಂತರವೂ ಬ್ರಿಟೀಷರಿಗೆ ಸಿಂಹಸಪ್ನವಾಗಿ ಕಾಡಿದ್ದನ್ನು ಸ್ಮರಿಸಿಕೊಂಡರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಉಪಾಧ್ಯಕ್ಷ ಸೈಯ್ಯದ್ ಅಶ್ರಫ್ ಬರ್ಮಾವರ್ ಟಿಪ್ಪುವಿನ ಕೊಡುಗೆಗಳನ್ನು ವಿವರಿಸಿದರು. ಹಿರಿಯ ಉಪಾಧ್ಯಕ್ಷ ಡಾ. ಎಂ.ಟಿ. ಹಸನ್ ಬಾಪ ಈ ಸಂದರ್ಭದಲ್ಲಿ ಮಾತನಾಡಿದರು.
ಶಮ್ಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಎಂ.ಆರ್. ಮಾನ್ವಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ತಲ್ಹಾ ಸಿದ್ದಿಬಾಪ ವಂದಿಸಿದರು. ಮೌಲಾನ ಅಬ್ದುಲ್ ಸುಭಾನ್ ನದ್ವಿ ಕಾರ್ಯಕ್ರಮ ನಿರೂಪಿಸಿದರು. ವೇದಿಕೆಯಲ್ಲಿ ಮೌಲಾನ ಅಝೀಝುರ್ರಹ್ಮಾನ್ ರುಕ್ನುದ್ದೀನ್ ನದ್ವಿ, ಮೌಲಾನ ಸೈಯ್ಯದ್ ಝುಬೇರ್, ಮೌಲಾನ ಯಾಸೀರ್ ನದ್ವಿ ಬರ್ಮಾವರ್ ಉಪಸ್ಥಿತರಿದ್ದರು.







