ನ.12: ಸಹ್ಯಾದ್ರಿ ಸೈನ್ಸ್ ಟ್ಯಾಲೆಂಟ್ ಹಂಟ್ ಗ್ರಾಂಡ್ ಫಿನಾಲೆ
ಮಂಗಳೂರು, ನ.10: ರಾಜ್ಯ ಸರಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಹಾಗೂ ಸಹ್ಯಾದ್ರಿ ಶಿಕ್ಷಣ ಸಂಸ್ಥೆಯ ಸಹಯೋಗದಲ್ಲಿ ಸಹ್ಯಾದ್ರಿ ಸೈನ್ಸ್ ಟ್ಯಾಲೆಂಟ್ ಹಂಟ್ ಗ್ಯಾಂಡ್ ಫಿನಾಲೆ ನ.12ರಂದು ಸಹ್ಯಾದ್ರಿ ಕಾಲೇಜಿನ ಆವರಣದಲ್ಲಿ ನಡೆಯಲಿದೆ ಎಂದು ಪ್ರಾಂಶುಪಾಲ ಉಮೇಶ್ ಎಂ. ಭೂಷಿ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
41 ವಲಯ ಮಟ್ಟದಲ್ಲಿ ವಿಜೇತರಾದ 200ಕ್ಕೂ ಅಧಿಕ ಪ್ರೌಢಶಾಲೆ ಮತ್ತು ಕಾಲೇಜುಗಳ 1,500 ವಿದ್ಯಾರ್ಥಿಗಳು ಈ ಗ್ರಾಂಡ್ ಫಿನಾಲೆಯಲ್ಲಿ ಸ್ಥಿರ ಮಾದರಿ, ಕಾರ್ಯಾಚರಣೆ ಮಾದರಿಗಳನ್ನು ಪ್ರದರ್ಶನ ಮಾಡಲಿದ್ದಾರೆ. ವಿವಿಧ ವಲಯಗಳ ವಿದ್ಯಾರ್ಥಿಗಳು ಮುಖಾಮುಖಿಯಾಗಿ ತಮ್ಮ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲಿದ್ದಾರೆ ಎಂದರು.
ಯುವ ಮನಸ್ಸಗಳನ್ನು ವಿಜ್ಞಾನ, ತಂತ್ರಜ್ಞಾನದ ಕಡೆಗೆ ಉತ್ತೇಜಿಸುವ ನಿಟ್ಟಿನಲ್ಲಿ ಗ್ರಾಮೀಣ ಮತ್ತು ನಗರ ಪ್ರದೇಶದ ಪಿಯು ವಿದ್ಯಾರ್ಥಿ ಪ್ರತಿಭೆಗಳನ್ನು ಗುರುತಿಸುವ ಕಾರ್ಯಕ್ರಮ ಇದಾಗಿದೆ. ನ.12ರಂದು ಬೆಳಗ್ಗೆ 10ರಿಂದ 1 ಗಂಟೆಯೊಳಗೆ ಸಹ್ಯಾದ್ರಿ ಕ್ಯಾಂಪಸ್‌ನಲ್ಲಿ ಸೈನ್ಸ್ ಟಾಲೆಂಟ್ ಮಾದರಿ ಪ್ರದರ್ಶನವನ್ನು ವೀಕ್ಷಿಸಲು ಮಂಗಳೂರು ವಲಯದ ಎಲ್ಲ ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸುವ ಅವಕಾಶವಿದೆ. ಮಧ್ಯಾಹ್ನ 2ರಿಂದ 4 ಗಂಟೆಯವರೆಗೆ ಮುಕ್ತ ಸಂವಾದ ನಡೆಯಲಿದೆ. ಉಡುಪಿ, ದಕ್ಷಿಣ ಜಿಲ್ಲೆಯ ವಿದ್ಯಾರ್ಥಿಗಳು ಭಾಗವಹಿಸಬಹುದು ಎಂದು ಅವರು ಹೇಳಿದರು.
ಕೈಗಾರಿಕಾ ಮತ್ತು ಶಿಕ್ಷಣ ಕ್ಷೇತ್ರದಲ್ಲಿರುವ ನುರಿತ ತಜ್ಞರು ಹಾಗೂ ಸಂಶೋಧಕರ ಜತೆ ಚರ್ಚೆಯೂ ನಡೆಯಲಿದೆ. ಭೋಪಾಲ್ ಬರ್ಕಾತುಲ್ಲಾ ವಿವಿ ಕುಲಪತಿ ಎಂ.ಡಿ. ತಿವಾರಿ, ವಿಕ್ರಂ ಸಾರಾಬಾಯಿ ಬಾಹ್ಯಾಕಾಶ ಸಂಶೋಧನಾ ಕೇಂದ್ರದ ಪ್ರಾಧ್ಯಾಪಕ ಪದ್ಮಶ್ರೀ ಪ್ರಶಸ್ತಿ ವಿಜೇತ ಎಸ್.ಕೆ. ಶಿವಕುಮಾರ್, ಮುಂಬೈನ ಬಾಬಾ ಅಣುಶಕ್ತಿ ಸಂಶೋಧನಾ ಕೇಂದ್ರದ ಟಿಪಿಡಿ ವಿಭಾಗದ ಮುಖ್ಯಸ್ಥ ಪ್ರೊ. ಸಂಜಯ್ ಗಡ್ಕರಿ, ಬೆಂಗಳೂರಿನ ಐಐಎಸ್‌ಸಿ ಡಾ. ಗೋಪಾಲನ್ ಜಗದೀಶ್, ರಾಜಕೀಯ ವಿಶ್ಲೇಷಕ ದೀಪಕ್ ತಿಮ್ಮಯ್ಯ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದರು. ಸುದ್ದಿಗೋಷ್ಠಿಯಲ್ಲಿ ಸುಧೀರ್ ಶೆಟ್ಟಿ, ಮಂಜುನಾಥ್ ಉಪಸ್ಥಿತರಿದ್ದರು.







