ಉಳ್ಳಾಲ ಅಂಚೆ ಕಚೇರಿಯಲ್ಲಿ ನೋಟುಗಳ ವಿನಿಮಯಕ್ಕೆ ನಕಾರ: ಸಾರ್ವಜನಿಕರ ಆಕ್ರೋಶ
ಉಳ್ಳಾಲ, ನ.10: ಕೇಂದ್ರ ಸರಕಾರವು 500, 1,000 ಮುಖಬೆಲೆಯ ನೋಟುಗಳನ್ನು ನಿಷೇಧಿಸಿರುವ ಹಿನ್ನೆಲೆಯಲ್ಲಿ ನೋಟುಗಳ ವಿನಿಯಮಯಕ್ಕಾಗಿ ಸಾರ್ವಜನಿಕರು ರಾಷ್ಟ್ರೀಕೃತ ಬ್ಯಾಂಕ್‌ಗಳು ಹಾಗೂ ಅಂಚೆ ಕಚೇರಿಗಳಿಗೆ ಜಮಾಯಿಸುತ್ತಿದ್ದಾರೆ. ಆದರೆ ಉಳ್ಳಾಲ ಉಳ್ಳಾಲ ಅಂಚೆ ಕಚೇರಿಯಲ್ಲಿ ಬೆಳಗ್ಗಿನಿಂದಲೇ ಯಾವುದೇ ರೀತಿಯ ಹಣವಿನಿಮಯ ನಡೆಯದಿರುವುದರ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.
ಜನಸಾಮಾನ್ಯರ ಅನುಕೂಲಕ್ಕಾಗಿ ಗುರುವಾರ ಎಲ್ಲಾ ರಾಷ್ಟ್ರೀಕೃತ ಬ್ಯಾಂಕ್ ಮತ್ತು ಅಂಚೆ ಕಚೇರಿಗಳಲ್ಲಿ ಹಳೆಯ 500, 1,000 ನೋಟುಗಳಿಗೆ ಚಿಲ್ಲರೆ ಹಣ ವಿನಿಮಯ ನೀಡುವಂತೆ ಆದೇಶಿಸಿದ್ದರೂ ಉಳ್ಳಾಲದ ಅಂಚೆ ಕಚೇರಿಯಲ್ಲಿ ಮಾತ್ರ ಈ ಅವಕಾಶ ಇಲ್ಲದೇ ಇರುವುದು ಹಲವರ ಅಸಮಾಧಾನಕ್ಕೆ ಕಾರಣವಾಯಿತು. ಗುರುವಾರ ಬೆಳಗ್ಗೆ ಉಳ್ಳಾಲದ ಅಂಚೆಕಚೇರಿಯಲ್ಲಿ ಜನರು ಜಮಾಯಿಸಿದಾಗ ಅಲ್ಲಿ ಯಾವುದೇ ರೀತಿಯ ಹಣವಿನಿಮಯ ನಡೆಸಲಾಗುವುದಿಲ್ಲ ಎಂದು ಭಿತ್ತಿಪತ್ರಗಳನ್ನು ಹಾಕಲಾಗಿತ್ತು. ಇದನ್ನು ಕಂಡು ಅಸಮಾಧಾನಗೊಂಡ ನಾಗರಿಕರು ಅಂಚೆ ಕಚೇರಿ ಅಧಿಕಾರಿಗಳನ್ನು ತರಾಟೆಗೆ ತಗೆದುಕೊಂಡರು.
ಅಲ್ಲದೆ ಪೋಸ್ಟ್ ಮುಖೇನ ವಿದ್ಯುತ್ ಬಿಲ್ ಪಾವತಿಸುವರ ಬಳಿಯಿಂದ ಅಧಿಕಾರಿಗಳು 500, 1,000ದ ನೋಟುಗಳನ್ನು ಸ್ವೀಕರಿಸದೇ ಇದ್ದ ಪರಿಣಾಮ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.
ಬಳಿಕ ಸಾರ್ವಜನಿಕರು ಕಚೇರಿ ಅಧಿಕಾರಿಗಳಲ್ಲಿ ಮಂಗಳೂರಿನ ಮುಖ್ಯ ಅಂಚೆ ಕಚೇರಿಯ ಹಿರಿಯ ಅಧಿಕಾರಿಗಳಲ್ಲಿ ಸಮಸ್ಯೆಯನ್ನು ದೂರಿದ್ದಾರೆ. ಇದಕ್ಕೆ ಉತ್ತರಿಸಿದ ಹಿರಿಯ ಅಧಿಕಾರಿಗಳು ಬ್ಯಾಂಕುಗಳು ಅಂಚೆ ಕಚೆೇರಿಗಳಿಗೆ ಹಣವನ್ನು ಕಳುಹಿಸದ ಕಾರಣ ಚಿಲ್ಲರೆ ಹಣ ವಿನಿಮಯ ನಡೆಸಲು ಸಾಧ್ಯವಾಗಿಲ್ಲ. ಆದರೆ 500,1000 ನೋಟುಗಳ ಠೇವಣಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ.
ವಿದ್ಯುತ್ ಬಿಲ್ ಕಟ್ಟಲು ಅವಕಾಶ ಕಲ್ಪಿಸಿದ ಮೇಲಧಿಕಾರಿಗಳು
ಸಾರ್ವಜನಿಕರಲ್ಲಿ ಬಿಲ್ ಸ್ವೀಕರಿಸದೆ ನೋಟುಗಳನ್ನು ನಿರಾಕರಿಸಿದ ಉಳ್ಳಾಲದ ಅಂಚೆ ಕಚೇರಿ ಸಿಬ್ಬಂದಿಯ ವಿರುದ್ಧ ಸಾರ್ವಜನಿಕರು ಹಿರಿಯ ಅಧಿಕಾರಿಗಳಲ್ಲಿ ದೂರಿದ್ದು, ಸಮಸ್ಯೆಯನ್ನು ಪರಿಗಣಿಸಿದ ಹಿರಿ ಅಧಿಕಾರಿಗಳು ಬಿಲ್ ಪಾವತಿಗೆ 500,1000ದ ನೋಟುಗಳನ್ನು ಸ್ವೀಕರಿಸುವಂತೆ ಉಳ್ಳಾಲ ಕಚೇರಿ ಸಿಬ್ಬಂದಿಗೆ ಆದೇಶಿಸಿರು. ಬಳಿಕ ವಿದ್ಯುತ್ ಬಿಲ್ ಸಮಸ್ಯೆ ಪರಿಹಾರ ಕಂಡಿತು.
ಕೊಣಾಜೆ ಸ್ಟೇಟ್ ಬ್ಯಾಂಕ್‌ನಲ್ಲೂ ನಿರಾಕರಣೆ
ಕೊಣಾಜೆ ಮಂಗಳಗಂಗೋತ್ರಿ ಸ್ಟೇಟ್ ಬ್ಯಾಂಕ್ ಶಾಖೆಯಲ್ಲೂ ಗ್ರಾಹಕರಿಗೆ ಬ್ಯಾಂಕ್ ಸಿಬ್ಬಂದಿಯೊರ್ವರು ಈ ಬ್ಯಾಂಕ್‌ನಲ್ಲಿ ಖಾತೆಯನ್ನು ಹೊಂದಿದ್ದರೆ ಮಾತ್ರ ಹಣ ವಿನಿಯಮ ಮಾಡಲಾಗುವುದು ಹೇಳಿ ವಾಪಸ್ಸು ಕಳುಹಿಸುತ್ತಿದ್ದರು ಎಂದು ಕೊಣಾಜೆಯ ಗ್ರಾಹಕರೊಬ್ಬರು ದೂರಿದ್ದಾರೆ.





.jpg.jpg)



