ನ.12: ಎನ್‌ಐಟಿಕೆ ಕ್ಯಾಂಪಸ್‌ನ ಮೇಲ್ಛಾವಣಿ ಸೋಲಾರ್ ಪ್ಲಾಂಟ್ ಉದ್ಘಾಟನೆ

ಮಂಗಳೂರು, ನ.10: ಸುರತ್ಕಲ್‌ನ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆ್ ಟೆಕ್ನಾಲಜಿ (ಎನ್‌ಐಟಿಕೆ) ತನ್ನ ಕಟ್ಟಡಗಳ ಮೇಲ್ಛಾವಣಿಯಲ್ಲಿ ಸೋಲಾರ್ ಪವರ್ ಪ್ಲಾಂಟ್ ಅಳವಡಿಸಿಕೊಂಡ ಕೀರ್ತಿಗೆ ಪಾತ್ರವಾಗಿದ್ದು, ಈ ಘಟಕವನ್ನು ನ.12ರಂದು ಎನ್‌ಐಟಿಕೆಯ ಬೋರ್ಡ್ ಗವರ್ನರ್ಸ್‌ನ ಅಧ್ಯಕ್ಷ ವನಿತಾ ನಾರಾಯಣ್ ಉದ್ಘಾಟಿಸಲಿದ್ದಾರೆ ಎಂದು ಎನ್‌ಐಟಿಕೆ ನಿರ್ದೇಶಕ ಪ್ರೊ.ಕೆ.ಎನ್.ಲೋಕೇಶ್ ಗುರುವಾರ ಕ್ಯಾಂಪಸ್‌ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಪ್ರಥಮ ಹಂತದಲ್ಲಿ 11 ಕಟ್ಟಡಗಳ ಮೇಲ್ಛಾವಣಿಯಲ್ಲಿ ಸೋಲಾರ್ ಪ್ಲಾಂಟ್ ಅಳವಡಿಸಲಾಗಿದೆ. ಉಳಿದ ಕಟ್ಟಡದಲ್ಲೂ ಹಂತ ಹಂತವಾಗಿ ಈ ಯೋಜನೆ ರೂಪಿಸಲಾಗಿದೆ. ರಾಷ್ಟ್ರೀಯ ಸೋಲಾರ್ ಮಿಷನ್ ಯೋಜನೆಯಡಿ ಕೇಂದ್ರ ಮಾನವ ಸಂಪನ್ಮೂಲ ಇಲಾಖೆಯ ಸೂಚನೆ ಮೇರೆಗೆ ಎಲ್ಲ ಅತ್ಯುನ್ನತ ಶಿಕ್ಷಣ ಕೇಂದ್ರಗಳಲ್ಲಿ ಈ ಯೋಜನೆ ಜಾರಿಯಾಗುತ್ತಿದೆ. ಇದೀಗ ಎನ್‌ಐಟಿಕೆಯ 4 ಕಟ್ಟಡಗಳ ಮೇಲಿನ ಸೋಲಾರ್ ಘಟಕಕ್ಕೆ ಅಧಿಕೃತ ವಿದ್ಯುತ್ ಸಂಪರ್ಕ ನೀಡಲಾಗಿದ್ದು, ವಿದ್ಯುತ್ ಉತ್ಪಾದನೆ ಆರಂಭಿಸಿದೆ. ಹಸಿರೀಕರಣಕ್ಕೆ ಈ ಯೋಜನೆ ಅತ್ಯುತ್ತಮವಾಗಿದ್ದು, ಎಲ್ಲೆಡೆ ಅಳವಡಿಕೆಗೆ ಕೇಂದ್ರ ಸರಕಾರ ಪ್ರೋತ್ಸಾಹ ನೀಡುತ್ತಿದೆ ಎಂದು ಅವರು ಹೇಳಿದರು.
ಕ್ಲೀನ್ ಮ್ಯಾಕ್ಸ್ ಸೋಲಾರ್ ಅಭಿವೃದ್ಧಿ ಸಂಸ್ಥೆಯು ಈ ಸೋಲಾರ್ ಪ್ಲಾಂಟ್‌ನ್ನು ನಿರ್ವಹಿಸುತ್ತಿದೆ. ಎನ್‌ಐಟಿಕೆ ಇದಕ್ಕೆ ಸಹಯೋಗ ನೀಡಿದೆ. 25 ವರ್ಷಗಳ ಒಪ್ಪಂದದಂತೆ ಸಂಸ್ಥೆ ಎನ್‌ಐಟಿಕೆಗೆ ವಿದ್ಯುತ್ ನೀಡಲಿದ್ದು, ಮೆಸ್ಕಾಂಗಿಂತ ಕಡಿಮೆ ದರದಲ್ಲಿ ವಿದ್ಯುತ್ ಬಳಸಬಹುದಾಗಿದೆ. ಸಮುದ್ರದ ಬದಿ ಇರುವುದರಿಂದ ಸೋಲಾರ್ ಪ್ಲಾಂಟನ್ನು ವಿಶೇಷವಾಗಿ ದೀರ್ಘ ಬಾಳಿಕೆ, ಸುರಕ್ಷತೆಯನ್ನು ಗಮನದಲ್ಲಿರಿಸಿ ಅಭಿವೃದ್ಧಿಪಡಿಸಲಾಗಿದೆ ಎಂದು ಡಾ.ಡಿ.ಎನ್.ಗಾಂವ್ಕ್‌ರ್ ಮಾಹಿತಿ ನೀಡಿದರು.
ಇದೀಗ ಪ್ರತೀ ತಿಂಗಳು ಎನ್‌ಐಟಿಕೆ 40 ಲಕ್ಷ ರೂ. ವಿದ್ಯುತ್ ಬಿಲ್ ನಿಭಾಯಿಸಲಿದ್ದು, 2 ಮೆ.ವ್ಯಾ ವಿದ್ಯುತ್ ಬಳಕೆಯಾಗುತ್ತಿದೆ. ಸೋಲಾರ್ ಪ್ಲಾಂಟ್ ಕಾರ್ಯಾಚರಿಸಲು ಆರಂಭಿಸಿದಲ್ಲಿ ಪ್ರತೀ ತಿಂಗಳು 5 ಲಕ್ಷ ರೂ. ಉಳಿಸಬಹುದಾಗಿದೆ ಎಂದು ಗಾಂವ್ಕರ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಡೀನ್ ಪ್ರೊ. ಅಶೋಕ್ ಬಾಬು, ರಿಜಿಸ್ಟ್ರಾರ್ ಪ್ರೊ. ರವೀಂದ್ರನಾಥ್, ಡಾ. ಅರುಣ್ ಇಸ್ಲೂರ್ ಉಪಸ್ಥಿತರಿದ್ದರು.







