" 2000 ರೂ ಹೊಸ ನೋಟುಗಳ ಕಟ್ಟು ಹಿಡಿದುಕೊಂಡ ಬಿಜೆಪಿ ಮುಖಂಡರ ಪುತ್ರಿ" !
ವೈರಲ್ ಫೋಟೋ ಹಿಂದಿನ ವಾಸ್ತವವೇನು ?

ಹೊಸದಿಲ್ಲಿ, ನ. 10 : 500 ಹಾಗು 1000 ರೂ ನೋಟುಗಳ ಸ್ಥಗಿತ ಆದೇಶ ಹಠಾತ್ತನೆ ಬಂದ ಬಳಿಕ ಯಾರ ಕೈಯಲ್ಲಿ ಈ ಮೊತ್ತದ ನೋಟು ಇದೆಯೋ ಅವರೇ ಸೆಲೆಬ್ರಿಟಿಗಳಾಗಿಬಿಟ್ಟಿದ್ದಾರೆ ! ಗುರುವಾರ ಹೊಸ 500 ಹಾಗು 2000 ರೂ ನೋಟುಗಳು ಬಿಡುಗಡೆಯಾದ ಬಳಿಕ ಒಂದು ಹೊಸ ನೋಟು ಹಿಡಿದು ತೆಗೆದ ಸೆಲ್ಫಿಗಳು ಫೇಸ್ ಬುಕ್, ಟ್ವಿಟ್ಟರ್ ಗಳಲ್ಲಿ ತುಂಬಿ ಹೋಗಿದೆ . ಹೀಗಿರುವಾಗ ಕೈಯಲ್ಲಿ 2000 ರೂ ಹೊಸ ನೋಟುಗಳ ಇಡೀ ಕಟ್ಟನ್ನೇ ಹಿಡಿದುಕೊಂಡ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಬಂದರೆ ಹೇಗಾಗಬೇಡ ?
ಟ್ವಿಟ್ಟರ್ ನಲ್ಲಿ 'Vishesh4 ಹೆಸರಿನ ಹ್ಯಾಂಡಲ್ ನಿಂದ ಯುವತಿಯೊಬ್ಬಳು 2000 ರೂ ಹೊಸ ನೋಟುಗಳ ಇಡೀ ಕಟ್ಟನ್ನೇ ಹಿಡಿಯುಕೊಂಡ ಫೋಟೋವೊಂದು ಟ್ವೀಟ್ ಆಯಿತು. ಸಾಲದ್ದಕ್ಕೆ "ಇದು ಬಿಜೆಪಿ ಮುಖಂಡ ಕೇಶವ್ ಮೌರ್ಯ ಅವರ ಪುತ್ರಿ ನಳಿನಿ ಮೌರ್ಯ . ಹಾಗಾಗಿ ಬೇರೆಯವರಿಗೆ ಇನ್ನೂ ಒಂದು ನೋಟು ಸಿಗುವುದೇ ಕಷ್ಟವಾಗಿರುವಾಗ ಈಕೆಗೆ ನೋಟಿನ ಕಟ್ಟೇ ಸಿಕ್ಕಿದೆ " ಎಂದು ಅದರಲ್ಲಿ ಹೇಳಲಾಗಿತ್ತು. ಇಷ್ಟು ಹೇಳಿದ ಮೇಲೆ ಇನ್ನು ಟ್ವಿಟ್ಟರ್ ಬಳಕೆದಾರರು ಸುಮ್ಮನಿರುತ್ತಾರಾ ? ಫೋಟೋ ಯದ್ವಾ ತದ್ವ ವೈರಲ್ ಆಗಿ ಬಿಟ್ಟಿದೆ.
ತಕ್ಷಣ 'centerofright' ಎಂಬ ಹ್ಯಾಂಡಲ್ ನಿಂದ ಕೇಶವ್ ಮೌರ್ಯ ಅವರ ಅಫಿಡವಿಟ್ ಪ್ರತಿ ಟ್ವೀಟ್ ಆಯಿತು. ಇದರಲ್ಲಿ ಕೇಶವ್ ಅವರಿಗೆ ಹೆಣ್ಣು ಮಕ್ಕಳೇ ಇಲ್ಲ ಎಂಬುದು ಸಾಬೀತಾಯಿತು.ಮತ್ತೆ ಫೋಟೋ ವೈರಲ್ !
ಅಷ್ಟೊತ್ತಿಗೆ ಈ ಯುವತಿ ಬ್ಯಾಂಕ್ ಉದ್ಯೋಗಿ . ಹಾಗಾಗಿ ಆಕೆಯ ಕೈಯಲ್ಲಿ ಈ ಹೊಸ ನೋಟಿನ ಕಟ್ಟು ಬಂದಿದೆ ಎಂಬ ಮಾಹಿತಿ ಹೊರಬಂತು. ಅದು ಎಷ್ಟು ಸತ್ಯ ಎಂಬುದು ಇನ್ನೂ ಸಂಪೂರ್ಣ ಖಚಿತವಾಗಬೇಕಷ್ಟೆ.





