ನೋಟು ಅಮಾನ್ಯ ನಿರ್ಧಾರದ ‘ಎಫೆಕ್ಟ್’: ದೇವಸ್ಥಾನ, ಟ್ರಸ್ಟ್‌ಗಳಿಗೆ ತರಾತುರಿಯ ದೇಣಿಗೆ

ಮುಂಬೈ, ನ.10: ಸುಮಾರು 100ರಷ್ಟು ದೇವಸ್ಥಾನ ಮತ್ತು ಟ್ರಸ್ಟ್‌ಗಳಿಗೆ ತರಾತುರಿಯಲ್ಲಿ ದೇಣಿಗೆ, ಸಹಕಾರ ಬ್ಯಾಂಕ್ ಮತ್ತು ಸೊಸೈಟಿಗಳಲ್ಲಿ ಭಾರೀ ಮೊತ್ತದ ಠೇವಣಿ - ಇದು ನ.8ರಂದು ಕೇಂದ್ರ ಸರಕಾರ ಅಧಿಕ ಮುಖಬೆಲೆಯ ನೋಟುಗಳ ಅಮಾನ್ಯ ನಿರ್ಧಾರ ಪ್ರಕಟಿಸಿದ ಬಳಿಕ ಮಹಾರಾಷ್ಟ್ರದಲ್ಲಿ ಕಂಡು ಬಂದ ಬೆಳವಣಿಗೆ.
ದೇವಸ್ಥಾನದ ಆಡಳಿತ ಮಂಡಳಿಯ ಜೊತೆ ಒಪ್ಪಂದ ಮಾಡಿಕೊಂಡು , ತಮ್ಮಲ್ಲಿರುವ ‘ಲೆಕ್ಕ ತಪ್ಪಿಸಿದ’ ಹಣವನ್ನು ದೇವಸ್ಥಾನಕ್ಕೆ ದೇಣಿಗೆಯಾಗಿ ನೀಡಿರುವ ಪ್ರಕರಣಗಳ ಬಗ್ಗೆ ಮಾಹಿತಿ ತಿಳಿದುಬಂದಿದೆ. ಅಲ್ಲದೆ ಕೆಲವು ರಾಜಕಾರಣಿಗಳ ನಿಯಂತ್ರಣದಲ್ಲಿರುವ ಸಹಕಾರ ಬ್ಯಾಂಕ್ ಮತ್ತು ಸೊಸೈಟಿಗಳ ಆಡಳಿತ ವರ್ಗದವರನ್ನು ‘ವಿಶ್ವಾಸಕ್ಕೆ ತೆಗೆದುಕೊಂಡು’ ಭಾರೀ ಮೊತ್ತದ ಠೇವಣಿಗಳನ್ನು ಇರಿಸಲಾಗಿರುವ ಮಾಹಿತಿಯೂ ದೊರೆತಿದೆ. ನೋಟು ಅಮಾನ್ಯ ನಿರ್ಧಾರದ ಬಳಿಕ ನಡೆದ ಬೆಳವಣಿಗೆ ಇದು ಎಂದು ರಾಜ್ಯದ ಹಿರಿಯ ಸಚಿವರೋರ್ವರು ತಿಳಿಸಿದ್ದಾರೆ.
ರಾಜಕಾರಣಿಗಳ ಆಶ್ರಯದಲ್ಲಿರುವ ಇಂತಹ ಬಹುತೇಕ ಬ್ಯಾಂಕ್‌ಗಳು, ದೇವಸ್ಥಾನಗಳಲ್ಲಿ ಲೆಕ್ಕಪತ್ರಕ್ಕೆ ಕಂಪ್ಯೂಟರ್ ಬಳಸಲಾಗುತ್ತಿಲ್ಲ. ಆದ್ದರಿಂದ ರಶೀದಿಯಲ್ಲಿ ಠೇವಣಿ ಇರಿಸಿದ ಅಥವಾ ದೇಣಿಗೆ ನೀಡಿದ ದಿನಾಂಕವನ್ನು ಬೇಕೆಂದ ಹಾಗೆ ನಮೂದಿಸಲು ಅವಕಾಶ ಇರುತ್ತದೆ .
ಇಂತಹ ಸಂದರ್ಭದಲ್ಲಿ ಈ ದೇಣಿಗೆಗಳು ಕಪ್ಪು ಹಣವನ್ನು ಬಿಳಿ (ಅಧಿಕೃತ)ಗೊಳಿಸಲು ಕಾರಣವಾಗುತ್ತದೆ. ಈ ರೀತಿಯ ಅನುಮಾನಾಸ್ಪದ ಪ್ರಕರಣಗಳ ಬಗ್ಗೆ ಗಮನ ಇರಿಸಲಾಗಿದೆ. ವಂಚನೆ ನಡೆಸುವರನ್ನು ಮತ್ತು ವಂಚಕರಿಗೆ ನೆರವಾಗುವವರನ್ನು ಸೂಕ್ತ ಶಿಕ್ಷೆಗೆ ಗುರಿಪಡಿಸಲಾಗುವುದು ಎಂದವರು ತಿಳಿಸಿದ್ದಾರೆ.





