ಗುಜರಿಯವನಿಗೆ ಸಿಕ್ಕಿದ ಚೀಲ ತುಂಬಾ ಸಾವಿರದ ನೋಟುಗಳು!

ಪುಣೆ, ನ.10: ಒಂದು ಸಾವಿರ ರೂ. ಹಾಗೂ 500 ರೂ.ಮುಖಬೆಲೆಯ ನೋಟುಗಳನ್ನು ಕೇಂದ್ರ ಸರಕಾರ ಅಪವೌಲ್ಯಗೊಳಿಸಿದ ಎರಡು ದಿನಗಳ ಬಳಿಕ, ಪುಣೆಯಲ್ಲಿ ಚಿಂದಿ ಆಯುವ ಮಹಿಳೆಯೊಬ್ಬಳಿಗೆ 1 ಸಾವಿರ ರೂ. ನೋಟುಗಳು ತುಂಬಿದ್ದ ಬ್ಯಾಗೊಂದು ರಸ್ತೆ ಬದಿಯಲ್ಲಿ ದೊರೆತಿದೆ. ವಾರಸುದಾರರಿಲ್ಲದೆ ಅನಾಥವಾಗಿ ಬಿದ್ದಿದ್ದ ಈ ಬ್ಯಾಗ್‌ನಲ್ಲಿರುವ ಹಣದ ವೌಲ್ಯ 52 ಸಾವಿರ ರೂ.ಗಳೆಂದು ತಿಳಿದುಬಂದಿದೆ.
ಇಳಿವಯಸ್ಸಿನ ಈ ಮಹಿಳೆ ಇಂದು ಮುಂಜಾನೆ ಎಂದಿನಂತೆ ಪುಣೆಯ ಕಾನೂನುಕಾಲೇಜು ಸಮೀಪದ ಓಣಿಯ ಬದಿಯಲ್ಲಿ ಚಿಂದಿಆಯುವ ಕೆಲಸದಲ್ಲಿ ನಿರತಳಾಗಿದ್ದಾಗ ಆಕೆಗೆ ಪ್ಲಾಸ್ಟಿಕ್ ಬ್ಯಾಗೊಂದು ಬಿದ್ದಿರುವುದನ್ನು ಕಂಡು ಬಂತು. ರದ್ದಿಯಿರಬೇಕೆಂದು ಭಾವಿಸಿದ ಆಕೆ ಬ್ಯಾಗನ್ನ್ನು ತೆರೆದು ನೋಡಿದಾಗ ಅದರಲ್ಲಿ ಚಿಂದಿವಸ್ತುಗಳ ಜೊತೆ ಸಾವಿರ ರೂ. ನೋಟುಗಳು ತುಂಬಿರುವುದನ್ನು ಕಂಡು ಹೌಹಾರಿದಳು. ಕೂಡಲೇ ಆಕೆ ತನ್ನ ಮೇಲ್ವಿಚಾರಕನಿಗೆ ಮಾಹಿತಿ ನೀಡಿದಳು. ಆನಂತರ ಅವರಿಬ್ಬರೂ ಪೊಲೀಸರನ್ನು ಸಂಪರ್ಕಿಸಿ, ಈ ನೋಟುಗಳು ತುಂಬಿರುವ ಚೀಲವನ್ನು ಪೊಲೀಸರಿಗೆ ಹಸ್ತಾಂತರಿಸಿದರು.
ಈ ನೋಟುಗಳನ್ನು ಯಾರು ತೊರೆದುಹೋಗಿದ್ದಾರೆ ಹಾಗೂ ಅವು ಅಸಲಿ ನೋಟುಗಳೇ ಎಂಬ ಬಗ್ಗೆ ತನಿಖೆಯನ್ನು ನಡೆಸುತ್ತಿರುವುದಾಗಿ ಪುಣೆಯ ಪೊಲೀಸ್ ಅಧಿಕಾರಿಯೊಬ್ಹರು ತಿಳಿಸಿದ್ದಾರೆ.





