ನೋಟ್ ಸಾಗಾಟಕ್ಕೆ ಪೊಲೀಸ್ ಭದ್ರತೆ: ಹೆಚ್ಚುವರಿ ಅಧೀಕ್ಷಕ ವೇದಮೂರ್ತಿ ಭರವಸೆ

ಪುತ್ತೂರು, ನ.10: ಹಳೆ ನೋಟು ವಿನಿಮಯ ಮತ್ತು ಹೊಸ ನೋಟು ಚಲಾವಣೆಯ ಹಿನ್ನಲೆಯಲ್ಲಿ ಎಲ್ಲಾ ಕಡೆಗಳಲ್ಲಿ ನೋಟುಗಳ ಸಾಗಾಟ ವ್ಯಾಪಕವಾಗಿ ನಡೆಯುತ್ತಿದ್ದು, ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ನೋಟು ಬದಲಾವಣೆ ವಿನಿಮಯ ನಡೆಸುತ್ತಿರುವುದರಿಂದ ಅಗತ್ಯ ಬಿದ್ದಲ್ಲಿ ನೋಟು ಸಾಗಾಟಕ್ಕೆ ದ್ರತೆ ಒದಗಿಸಲಾಗುವುದು ಎಂದು ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ವೇದಮೂರ್ತಿ ಭರವಸೆ ನೀಡಿದ್ದಾರೆ.
ಪುತ್ತೂರು ನಗರ ಠಾಣೆಯಲ್ಲಿ ಗುರುವಾರ ಸಂಜೆ ನಡೆದ ಬ್ಯಾಂಕ್ ಮ್ಯಾನೇಜರ್‌ಗಳ ಸಭೆಯು ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ವೇದಮೂರ್ತಿಯವರ ಅಧ್ಯಕ್ಷತೆಯಲ್ಲಿ ನಡೆಯಿತು. ಎಲ್ಲಾ ಕಡೆ ನೋಟ್‌ಗಳ ಸಾಗಾಟ ವ್ಯಾಪಕವಾಗಿ ನಡೆಯುತ್ತಿದ್ದು, ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ನಿತ್ಯವೂ ಹಳೆ ನೋಟುಗಳನ್ನು ಹಿಡಿದುಕೊಂಡು ಬ್ಯಾಂಕುಗಳಿಗೆ ಹೋಗುತ್ತಿದ್ದಾರೆ. ಇಂಥ ಸಂದರ್ಭವನ್ನು ದುರುಪಯೋಗ ಮಾಡಿಕೊಳ್ಳುವ ಸಾಧ್ಯತೆ ಇರುವ ಕಾರಣ ಕಳ್ಳರು, ವಂಚಕರ ವಿರುದ್ಧ ಬಾರೀ ಕಟ್ಟೆಚ್ಚರ ಅಗತ್ಯ. ಇದಕ್ಕಾಗಿ ಪೊಲೀಸ್ ಇಲಾಖೆಯೊಂದಿಗೆ ಬ್ಯಾಂಕ್‌ಗಳು ಸಹಕರಿಸಬೇಕು. ಒಂದು ಕಡೆಯಿಂದ ಇನ್ನೊಂದು ಕಡೆಗೆ ನೋಟುಗಳ ಸಾಗಾಟ ಮಾಡುವ ಸಂದರ್ಭ ಅಗತ್ಯ ಬಿದ್ದಲ್ಲಿ ಇಲಾಖೆಗೆ ತಿಳಿಸಿ. ನಾವು ಭದ್ರತೆ ನೀಡುತ್ತೇವೆ ಎಂದು ಅವರು ಹೇಳಿದರು.
ಪ್ರತೀ ಬ್ಯಾಂಕ್‌ಗಳಲ್ಲಿ ಈಗ ಗ್ರಾಹಕರ ದಟ್ಟಣೆ ವಿಪರೀತವಾಗಿದೆ. ಈ ಸಂದರ್ಭದಲ್ಲಿ ಬ್ಯಾಂಕ್‌ಗಳು ಗ್ರಾಹಕರಿಗೆ ನೆರವಾಗಲು ಪ್ರತ್ಯೇಕ ಕೌಂಟರ್ ತೆರೆಯಬೇಕು. ಗ್ರಾಹಕರು ನೋಟಿನ ಕೊರತೆ ಬಗ್ಗೆ ಭಯಭೀತರಾಗಿರುವ ಕಾರಣ ಆತಂಕಭರಿತರಾಗಿ ವರ್ತಿಸಬಹುದು. ಆಗ ಸಿಬ್ಬಂದಿ ತಾಳ್ಮೆಯಿಂದ ವ್ಯವಹರಿಸಿ ಮನವರಿಕೆ ಮಾಡಬೇಕು. ಗ್ರಾಹಕರು ತಾಳ್ಮೆ ಕೆಟ್ಟು ವರ್ತಿಸದಂತೆ ಮುಂಜಾಗರೂಕತೆ ವಹಿಸಬೇಕು. ಪ್ರತೀ ಬ್ಯಾಂಕ್‌ಗಳಲ್ಲಿ ಭದ್ರತಾ ಸಿಬ್ಬಂದಿಯನ್ನು ಕಟ್ಟೆಚ್ಚರ ಸ್ಥಿತಿಯಲ್ಲಿ ಇರಿಸಿಕೊಳ್ಳಬೇಕು ಎಂದು ಅವರು ಸೂಚಿಸಿದರು.
ಪುತ್ತೂರು ಎಎಸ್ಪಿ ರಿಷ್ಯಂತ್ ಸಿ.ಬಿ.ಮಾತನಾಡಿ, ಪ್ರತೀ ಶಾಖೆಗಳಿಗೆ ತಮ್ಮಲ್ಲಿನ ದೊಡ್ಡ ಗ್ರಾಹಕರ ಬಗ್ಗೆ ಗೊತ್ತಿರುವ ಕಾರಣ, ಅವರು ಹಣದೊಂದಿಗೆ ಬರುವ ಸಂದರ್ಭ ಮೊದಲೇ ತಿಳಿಸಿ. ಆಗ ಅಗತ್ಯ ಭದ್ರತೆ ಒದಗಿಸಲು ಸಾಧ್ಯವಾಗುತ್ತದೆ. ಅದೇ ರೀತಿ ಬ್ಯಾಂಕ್‌ನ ಒಳಗೆ ಎಲ್ಲ ಗ್ರಾಹಕರ ಚಲವಲನಗಳನ್ನು ಚಿತ್ರೀಕರಿಸಿಕೊಳ್ಳಿ ಎಂದು ಮ್ಯಾನೇಜರ್‌ಗಳಿಗೆ ಸೂಚನೆ ನೀಡಿದರು.
ಎಲ್ಲ ಕಡೆ ಪೊಲೀಸ್ ಹಾಕಲು ಸಾಧ್ಯವಿಲ್ಲದಿದ್ದರೂ ನಗರ ಪ್ರದೇಶದಲ್ಲಿ ನಾವು ಕಟ್ಟೆಚ್ಚರದಲ್ಲಿ ಇರುತ್ತೇವೆ. ತುರ್ತು ಸಂದರ್ಭದಲ್ಲಿ ತಕ್ಷಣ ಮಾಹಿತಿ ನೀಡಿ ಎಂದವರು ಸಲಹೆ ನೀಡಿದರು. ನಗರ ಠಾಣೆ ಇನ್‌ಸ್ಪೆಕ್ಟರ್ ಮಹೇಶ್ ಪ್ರಸಾದ್ ಮಾತನಾಡಿ, ಬ್ಯಾಂಕ್‌ಗಳಲ್ಲಿ ಸಿಬ್ಬಂದಿ ಕೊರತೆ ಇರುವ ಕಾರಣ ಗ್ರಾಹಕರ ಒತ್ತಡ ನಿಭಾಯಿಸಲು ಸಮಸ್ಯೆ ಆಗಬಹುದು. ಇದನ್ನು ಸರಿದೂಗಿಸಲು ಸಾಧ್ಯವಾದರೆ ಉನ್ನತ ಅಧಿಕಾರಿಗಳಿಗೆ ತಿಳಿಸಿ ಸಿಬ್ಬಂದಿಯ ಹಂಚಿಕೆ ಮಾಡಿಕೊಳ್ಳಿ ಎಂದು ಸೂಚಿಸಿದರು.
ನಾನಾ ರೀತಿಯ ಆಮಿಷ ನೀಡಿ ಆನ್‌ಲೈನ್ ವಂಚನೆ ಮೂಲಕ ಹಣ ನುಂಗುವ ಜಾಲವನ್ನು ನಿಗ್ರಹಿಸಲು ಬ್ಯಾಂಕ್‌ಗಳು ಇಲಾಖೆಗೆ ಸಹಕಾರ ನೀಡಬೇಕು ಎಂದು ಎಎಸ್ಪಿ ರಿಷ್ಯಂತ್ ಸಿ.ಬಿ. ಮನವಿ ಮಾಡಿದರು. ಇದಕ್ಕೆ ಬ್ಯಾಂಕ್ ಮ್ಯಾನೇಜರ್‌ಗಳು ಪ್ರತಿಕ್ರಿಯಿಸಿ ವಂಚಕರು ನೇರವಾಗಿ ಗ್ರಾಹಕರಿಗೆ ಕರೆ ಮಾಡುವ ಕಾರಣ ಅವರು ಮೋಸ ಹೋಗುತ್ತಿರುವುದು ನಮಗೆ ಗೊತ್ತಾಗುವುದಿಲ್ಲ. ಮೋಸ ಹೋದ ಬಳಿಕವೇ ಗೊತ್ತಾಗುತ್ತದೆ. ಈ ಬಗ್ಗೆ ಗ್ರಾಹಕರಲ್ಲೇ ಜಾಗೃತಿ ಮೂಡಬೇಕಿದೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಇನ್‌ಸ್ಪೆಕ್ಟರ್ ಮಹೇಶ್ ಪ್ರಸಾದ್, ತಮ್ಮ ಗ್ರಾಹಕರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಬ್ಯಾಂಕ್‌ಗಳು ಮಾಡಬೇಕು ಎಂದರು.
ನಗರ ಠಾಣೆಯ ಇನ್ಸ್‌ಪೆಕ್ಟರ್ ಮಹೇಶ್ ಪ್ರಸಾದ್, ಎಸ್ಸೈ ಓಮನ, ಟ್ರಾಫಿಕ್ ಎಸ್ಸೈ ನಾಗರಾಜ್ ಉಪಸ್ಥಿತರಿದ್ದರು.







