ಅಧ್ಯಕ್ಷೀಯ ಚುನಾವಣೆಯಲ್ಲಿ ಸೋಲು: ಪ್ರತಿಕ್ರಯಿಸಿದ ಹಿಲರಿ

ವಾಶಿಂಗ್ಟನ್, ನ. 10: ಅಮೆರಿಕದ ಅಧ್ಯಕ್ಷೀಯ ಚುನಾವಣೆಯ ಜಿದ್ದಾಜಿದ್ದಿನ ಹೋರಾಟದಲ್ಲಿ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಹಿಲರಿ ಕ್ಲಿಂಟನ್ ಕೊನೆಯವರೆಗೂ ಹೋರಾಟ ನಡೆಸಿದರು. ಆದರೂ, ಅಧ್ಯಕ್ಷೀಯ ಪದವಿಗೆ ಅನರ್ಹ ಎಂಬುದಾಗಿ ಅವರು ಬಣ್ಣಿಸಿದ ವ್ಯಕ್ತಿಯೇ ಅಧ್ಯಕ್ಷನಾಗಿ ಆಯ್ಕೆಯಾಗುವ ವಿದ್ಯಮಾನಕ್ಕೆ ಅವರು ಕೊನೆಯಲ್ಲಿ ಸಾಕ್ಷಿಯಾಗಬೇಕಾಯಿತು.
ಈಗ ಎಲ್ಲಾ ಮುಗಿದಿದೆ. ಇನ್ನು, ಅಧಿಕಾರದ ಸುಗಮ ಹಸ್ತಾಂತರವನ್ನು ಗೌರವಿಸಿ ಎಂಬುದಾಗಿ ನಿಯೋಜಿತ ಅಧ್ಯಕ್ಷ ಹಾಗೂ ತನ್ನ ನಿರಾಶೆಗೊಂಡ ಬೆಂಬಲಿಗರನ್ನು ಅವರು ಒತ್ತಾಯಿಸಿದ್ದಾರೆ.
‘‘ನಮ್ಮ ದೇಶವು ನಾವು ಎಣಿಸಿರುವುದಕ್ಕಿಂತಲೂ ಹೆಚ್ಚು ವಿಭಜನೆಗೊಂಡಿದೆ’’ ಎಂದು ಚುನಾವಣೆಯಲ್ಲಿ ಸೋತ ಗಂಟೆಗಳ ಬಳಿಕ ಹಿಲರಿ ಹೇಳಿದರು.
ಅಧ್ಯಕ್ಷೀಯ ಚುನಾವಣೆಯ ಅನಿರೀಕ್ಷಿತ ಫಲಿತಾಂಶಕ್ಕೂ ಮುನ್ನ, ಮುಂದಿನ ಅಧ್ಯಕ್ಷೆಯಾಗಿ ಹಿಲರಿ ಕ್ಲಿಂಟನ್ ಆಯ್ಕೆ ಖಚಿತ ಎಂಬುದಾಗಿ ಬಹುತೇಕ ಎಲ್ಲರೂ ಭಾವಿಸಿದ್ದರು. ಸಮೀಕ್ಷೆಗಳು ಅವರ ಪರವಾಗಿಯೇ ಇದ್ದವು.
‘‘ಆದರೆ, ನನಗೆ ಅಮೆರಿಕದ ಮೇಲೆ ಈಗಲೂ ನಂಬಿಕೆಯಿದೆ ಹಾಗೂ ಯಾವತ್ತೂ ನಂಬಿಕೆಯಿರುತ್ತದೆ. ನಿಮಗೂ ನಂಬಿಕೆಯಿರುವುದಾದರೆ, ಈ ಪಲಿತಾಂಶವನ್ನು ನೀವು ಸ್ವೀಕರಿಸಬೇಕು ಹಾಗೂ ಭವಿಷ್ಯದ ಕಡೆಗೆ ನೋಡಬೇಕು’’ ಎಂದರು.
ತನ್ನ ಪ್ರಚಾರ ತಂಡದ ಸಿಬ್ಬಂದಿ, ಸ್ವಯಂಸೇವಕರು ಮತ್ತು ಬೆಂಬಲಿಗರ ತುರ್ತು ಸಭೆಯಲ್ಲಿ ಹಿಲರಿ ಮಾತನಾಡುತ್ತಿದ್ದರು.
‘‘ಡೊನಾಲ್ಡ್ ಟ್ರಂಪ್ ನಮ್ಮ ಅಧ್ಯಕ್ಷರಾಗುತ್ತಿದ್ದಾರೆ. ನಾವು ಅವರ ಬಗ್ಗೆ ಮುಕ್ತ ಮನಸ್ಸು ಹೊಂದಿ ದೇಶವನ್ನು ಮುನ್ನಡೆಸುವ ಅವಕಾಶವನ್ನು ಅವರಿಗೆ ನೀಡಬೇಕು’’ ಎಂದು ಅವರು ನುಡಿದರು.
ಮಾತನಾಡುವಾಗ ಅವರ ಕಣ್ಣುಗಳು ಮಂಜಾದವು. ಆದರೂ, ತನ್ನ ಶಾಂತಚಿತ್ತತೆಯನ್ನು ಕಾಪಾಡಿಕೊಂಡು ಮಾತನಾಡಿದರು. ಆದರೆ, ಅವರ ಬೆಂಬಲಿಗರಿಗೆ ಕಣ್ಣೀರನ್ನು ತಡೆದುಕೊಳ್ಳಲು ಸಾಧ್ಯವಾಗಲಿಲ್ಲ.
‘‘ನಿಮಗೆ ಎಷ್ಟು ನಿರಾಶೆಯಾಗಿದೆ ಎಂದು ನನಗೆ ಗೊತ್ತು. ಯಾಕೆಂದರೆ, ನನಗೂ ನಿರಾಶೆಯಾಗಿದೆ. ಈ ಪ್ರಯತ್ನದಲ್ಲಿ ಭರವಸೆ ಮತ್ತು ಕನಸುಗಳನ್ನು ಹೂಡಿಕೆ ಮಾಡಿರುವ ಕೋಟ್ಯಂತರ ಅಮೆರಿಕನ್ನರಿಗೂ ನಿರಾಶೆಯಾಗಿದೆ’’ ಎಂದು ಹಿಲರಿ ನುಡಿದರು.
‘‘ಇದು ನೋವು ಕೊಟ್ಟಿದೆ. ಈ ನೋವು ತುಂಬಾ ಕಾಲ ಇರುತ್ತದೆ’’ ಎಂದರು.







