ಯುಪಿಸಿಎಲ್ ವಿಸ್ತರಣೆ: ವಿರೋಧಿಗಳ ಬಾಯ್ಮುಚ್ಚಿಸಿ ರತ್ನಗಂಬಳಿ ಹಾಸಿದ 'ಸಂತ್ರಸ್ತ'ರು

ಕಾಪು, ನ.10:ಎಲ್ಲೂರು ಕೇಂದ್ರವಾಗಿ ಕಾರ್ಯಾಚರಿಸುತ್ತಿರುವ ಉಡುಪಿ ಪವರ್ ಕಾರ್ಪೋರೇಷನ್ ಲಿಮಿಟೆಡ್ (ಯುಪಿಸಿಎಲ್) ಜಿಲ್ಲೆಯ ಎಲ್ಲೂರು ಮತ್ತು ಸಾಂತೂರು ಗ್ರಾಮಗಳಲ್ಲಿ ತನ್ನ ಕಲ್ಲಿದ್ದಲು ಆಧಾರಿತ ಉಷ್ಣ ವಿದ್ಯುತ್ ಸ್ಥಾವರದ ಸಾಮರ್ಥ್ಯವನ್ನು ತಲಾ 800 ಮೆಗಾವ್ಯಾಟ್‌ನ ಎರಡು ಘಟಕಗಳೊಂದಿಗೆ ವಿಸ್ತರಿಸುವ ಯೋಜನೆಗಾಗಿ ಎಲ್ಲೂರು ಗ್ರಾಮದ ಕುಂಜೂರು ದುರ್ಗಾದೇವಿ ಹಿರಿಯ ಪ್ರಾಥಮಿಕ ಶಾಲೆಯ ಮೈದಾನದಲ್ಲಿ ನಡೆಸಿದ ಪರಿಸರ ಸಾರ್ವಜನಿಕ ಸಭೆ, ಅದಾನಿ ಕಂಪೆನಿ ಹಾಗೂ ಯುಪಿಸಿಎಲ್‌ನ ಹೊಗಳಿಕೆಗೆ ಸೀಮಿತವಾಗಿ ಮುಕ್ತಾಯಗೊಂಡಿತು.
ಈ ಮೂಲಕ ಹೊಸ ಕಾನೂನಿನಂತೆ ಕಡ್ಡಾಯವಾಗಿ ನಡೆಯಬೇಕಿದ್ದ ಈ ಸಾರ್ವಜನಿಕ ಅಹವಾಲು ಆಲಿಕೆ ಸಭೆಯಲ್ಲಿ ಯೋಜನೆಯ ಸಾಧಕ-ಬಾಧಕಗಳ ಕುರಿತು ಯಾವುದೇ ಚರ್ಚೆ ನಡೆಯದೇ ಏಕಪಕ್ಷೀಯವಾಗಿ ಕಂಪೆನಿಯ ಹೊಗಳಿಕೆಗೆ ಸೀಮಿತವಾಗಿ ಉಳಿಯಿತು.
ಆರಂಭದಿಂದಲೂ ಪರಿಸರದಲ್ಲಿ ಉಷ್ಣ ವಿದ್ಯುತ್ ಯೋಜನೆಯನ್ನು ವಿರೋಧಿಸುತ್ತಿರುವ ನಂದಿಕೂರು ಜನಜಾಗೃತಿ ಸಮಿತಿಯ ಬಾಲಕೃಷ್ಣ ಶೆಟ್ಟಿ, ಜಯಂತಕುಮಾರ್ ಹಾಗೂ ವಿಜಯಕುಮಾರ್ ಹೆಗ್ಡೆ ಅವರು ಯೋಜನೆಯ ಸಾಧಕ-ಬಾಧಕಗಳು, ಇದರ ವಿಸ್ತರಣೆಯಿಂದ ಆಗಬಹುದಾದ ಅಪಾಯಗಳ ಕುರಿತು ವೈಜ್ಞಾನಿಕ ವಿಶ್ಲೇಷಣೆಗೆ ತೊಡಗುತಿದ್ದಂತೆ ಇದಕ್ಕಾಗಿಯೇ ಬಂದಂತಿದ್ದ ಸಭಿಕರ ಒಂದು ವರ್ಗ ಅವರಿಗೆ ಮಾತನಾಡಲು ಅವಕಾಶ ನೀಡದೇ ಗಲಾಟೆ ಎಬ್ಬಿಸುವ ಮೂಲಕ ಅವರ ಮಾತುಗಳನ್ನು ಅರ್ಧದಲ್ಲೇ ತುಂಡರಿಸಿ, ವಿರೋಧದ ಧ್ವನಿಯನ್ನೇ ಅಡಗಿಸಲಾಯಿತು.
ಉಳಿದಂತೆ ಮಾತನಾಡಿದ ಶೇ.90ಕ್ಕೂ ಅಧಿಕ ಮಂದಿ ಯೋಜನೆಯ ವಿಸ್ತರಣೆಯ ಬಗ್ಗೆ ಒಂದೇ ಶಬ್ದವನ್ನು ಮಾತನಾಡದೇ, ಯುಪಿಸಿಎಲ್‌ನ ಕಳೆದೊಂದು ವರ್ಷದಿಂದ ಕಂಪೆನಿ, ಸಿಎಸ್‌ಆರ್ ನಿಧಿಯಲ್ಲಿ ನೀಡುತ್ತಿರುವ ಅನುದಾನವನ್ನು ದೃಷ್ಟಿಯಲ್ಲಿಟ್ಟುಕೊಂಡು ಮಾತನಾಡಿ ಕಂಪೆನಿಯನ್ನು, ಅದಾನಿ ಕಂಪೆನಿಯ ಅಧ್ಯಕ್ಷ ಗೌತಮ್ ಅದಾನಿ, ಯುಪಿಸಿಎಲ್‌ನ ಆಡಳಿತ ನಿರ್ದೇಶಕ ಕಿಶೋರ್ ಆಳ್ವ ಅವರನ್ನು ಹೊಗಳಿ ಅಟ್ಟಕ್ಕೇರಿಸಿ ಸಭೆಯ ಉದ್ದೇಶವನ್ನೇ ನಿರರ್ಥಕಗೊಳಿಸಿಬಿಟ್ಟರು.
ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅವರ ಅಧ್ಯಕ್ಷತೆಯಲ್ಲಿ ಕರ್ನಾಟಕ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಕರೆದ ಪರಿಸರ ಸಾರ್ವಜನಿಕ ಸಭೆಯಲ್ಲಿ ಮೊದಲು ಯುಪಿಸಿಎಲ್‌ನ ಪರಿಸರ ವ್ಯವಸ್ಥಾಪಕ ಚೆನ್ನಬಸವಣ್ಣ ಅವರು ಈಗಾಗಲೇ ಎರಡು ಯುನಿಟ್‌ಗಳಲ್ಲಿ ಕಾರ್ಯಾಚರಿಸುತ್ತಿರುವ ಯುಪಿಸಿಎಲ್‌ನ 1200 ಮೆಗಾವ್ಯಾಟ್ ಸಾಮರ್ಥ್ಯವನ್ನು 2800 ಮೆ.ವ್ಯಾಟ್‌ಗೆ (ಹೆಚ್ಚುವರಿಯಾಗಿ 800ಮೆ.ವ್ಯಾಟ್‌ನ ಎರಡು ಸ್ಥಾವರ) ವಿಸ್ತರಿಸಲು ಈಗಾಗಲೇ ಸರಕಾರಗಳ ಅನುಮತಿ ದೊರಕಿದ್ದು, ಉಲ್ಲೇಖ ನಿಯಮಗಳಲ್ಲಿ ನಿಗದಿಯಾದಂತೆ ವಿಸ್ತರಣೆಗಾಗಿ ಈ ಪರಿಸರ ಸಾರ್ವಜನಿಕ ಅಹವಾಲು ಸಭೆ ಕರೆಯಲಾಗಿದೆ ಎಂದರು.
ಸಮಸ್ಯೆ ಇಲ್ಲ, ಹೊಗಳಿಕೆಯೇ ಎಲ್ಲಾ
ಬಳಿಕ ಯೋಜನೆ ವಿಸ್ತರಣೆ ಕುರಿತು ತಮ್ಮ ಅನಿಸಿಕೆಗಳನ್ನು ಸಭೆಯ ಮುಂದಿಡಬೇಕಿದ್ದ ಸಂತ್ರಸ್ತರು ಹಾಗೂ ಯೋಜನೆಯಿಂದ ಸಂಕಷ್ಟಕ್ಕೊಳ ಗಾಗಿರುವ ಪರಿಸರದ ಬಾಧಿತ ಜನರ ಬದಲು ಮಾತನಾಡಲು ಬಂದವರು ಕಂಪೆನಿಯನ್ನು, ಕಿಶೋರ್ ಆಳ್ವರನ್ನು ಪ್ರಶಂಸಿಸುವುದಕ್ಕೆ ತಮ್ಮ ಮಾತುಗಳನ್ನು ಸೀಮಿತಗೊಳಿಸಿ ಸಭೆಯ ಉದ್ದೇಶವನ್ನೇ ಪ್ರಶ್ನಾರ್ಹಗೊಳಿಸಿಬಿಟ್ಟರು.
ಹೊಗಳಿಕೆಯಲ್ಲಿ ಪರಿಸರದ ಜಿಪಂ, ತಾಪಂ ಸದಸ್ಯರು, ಗ್ರಾಪಂಗಳ ಅಧ್ಯಕ್ಷರು, ಸದಸ್ಯರು ಸೇರಿದ್ದರು. ಹಲವು ತಮ್ಮ ಬೇಡಿಕೆಗಳ ಪಟ್ಟಿಯನ್ನೇ ಮುಂದಿಟ್ಟರು. ಕಾಪುವಿನಲ್ಲಿ ಕ್ಯಾನ್ಸರ್ ಆಸ್ಪತ್ರೆ ನಿರ್ಮಿಸಿ, ಸುಸಜ್ಜಿತ ಆಸ್ಪತ್ರೆ ನಿರ್ಮಿಸಿ, ವೃದ್ಧಾಶ್ರಮ ನಿರ್ಮಿಸಿ, ಅಬಲಾಶ್ರಮ ನಿರ್ಮಿಸಿ ಎಂದು ಪಟ್ಟಿಯನ್ನು ನೀಡಿದರೇ ಹೊರತು ಪರಿಸರದಲ್ಲಿ ಕ್ಯಾನ್ಸರ್ ರೋಗಿಗಳ, ವಿವಿಧ ರೋಗಿಗಳ ಸಂಖ್ಯೆ ಹೆಚ್ಚಲು ಕಾರಣವೇನು ಎಂಬುದನ್ನು ವಿಶ್ಲೇಷಿಸಲು ಯಾರೂ ಹೋಗಲಿಲ್ಲ.
ಕಾಪು ಶಾಸಕ ಹಾಗೂ ಮಾಜಿ ಶಾಸಕ ವಿನಯಕುಮಾರ್ ಸೊರಕೆ ಅವರು ಯೋಜನೆಯನ್ನು, ವಿಸ್ತರಣೆಯನ್ನು ವಿರೋಧಿಸದಿದ್ದರೂ, ಕಾಪು ಕ್ಷೇತ್ರಕ್ಕೆ ಉಚಿತ ವಿದ್ಯುತ್ ನೀಡಬೇಕು, ಸ್ಥಳೀಯರಿಗೆ ಉದ್ಯೋಗದಲ್ಲಿ ಆದ್ಯತೆ ನೀಡಬೇಕು, ವಿವಿಧ ಸೌಲಭ್ಯಗಳನ್ನು ಒದಗಿಸಬೇಕು, ಸಿಎಸ್‌ಆರ್ ನಿಧಿಯಲ್ಲಿ ಮೊದಲು ಯೋಜನಾ ಪ್ರದೇಶದ ಗ್ರಾಪಂಗಳಿಗೆ ಆದ್ಯತೆ ನೀಡಬೇಕು ಮುಂತಾದ ಎಂಬ ಶರತ್ತುಗಳನ್ನು ಹಾಕಿದರು.
ಆದರೆ ಜಿಪಂ ಉಪಾಧ್ಯಕ್ಷೆ ಶೀಲಾ ಕೆ.ಶೆಟ್ಟಿ, ಸದಸ್ಯರಾದ ಕಟಪಾಡಿ ಶಂಕರ ಪೂಜಾರಿ, ಗೀತಾಂಜಲಿ ಸುವರ್ಣ, ಶಶಿಕಾಂತ ಪಡುಬಿದ್ರೆ ಮುಂತಾದವರು ಹಿಂದೆ ಯೋಜನೆ ವಿರುದ್ಧ ತಾವು ಮಾಡುತಿದ್ದ ಹೋರಾಟವನ್ನು ನೆನಪಿಸಿ ಈಗ ಯೋಜನೆಗೆ ಸಂಪೂರ್ಣ ಬೆಂಬಲ ಘೋಷಿಸಿದರು.
ಒಟ್ಟಾರೆಯಾಗಿ ಇಡೀ ಸಭೆಯಲ್ಲಿ ಸ್ಥಳೀಯ ಜನರ ಸಂಕಟ, ನೋವು, ಸಮಸ್ಯೆಗಳ ಚರ್ಚೆ ನಡೆಯದೇ, ಕಂಪೆನಿ ಮೇಲಿನ ತಮ್ಮ ಒಲವನ್ನು ತೋರಿಸಲು ಒಂದು ವೇದಿಕೆಯಾಗಿತು. ಯೋಜನೆಯ ನಿಜವಾದ ಸಂತ್ರಸ್ಥರು ಮಾತನಾಡಲು ಅವಕಾಶ ಸಿಗದೇ ಮಾತನಾಡಿದವರೆಲ್ಲ ಕಂಪೆನಿಗೆ ತಮ್ಮ ಬೇಡಿಕೆಯ ಪಟ್ಟಿ ಇಡಲು ಪೈಪೋಟಿ ನಡೆಸಿದರು.
ಸಭೆಯಲ್ಲಿ ಕೇಳಿಬಂದ ಮಾತುಗಳು
ಶೇಖರ್ ಹೆಜ್ಮಾಡಿ(ದಸಂಸ)
ಯೋಜನೆಯ ವಿಸ್ತರಣೆಗೆ ದಸಂಸದ ಸಂಪೂರ್ಣ ಬೆಂಬಲವಿದೆ. ಇದರಲ್ಲಿ ದಲಿತರಿಗೆ ಉದ್ಯೋಗದಲ್ಲಿ ಆದ್ಯತೆ ನೀಡಬೇಕು. ದಲಿತರಿಗೆ ಸರಕಾರಿ ಉದ್ಯೋಗ ಸಿಗುತ್ತಿಲ್ಲ, ಯುಪಿಸಿಎಲ್‌ನಂಥ ಖಾಸಗಿ ಯವರೇ ನೀಡಬೇಕು.
ಶೀಲಾ ಕೆ.ಶೆಟ್ಟಿ (ಜಿಪಂ ಉಪಾದ್ಯಕ್ಷೆ): 20 ವರ್ಷ ಹೋರಾಟ ನಡೆಸಿದವಳು ನಾನು. ಈಗ ನಾನು ಯೋಜನೆಯನ್ನು ಬೆಂಬಲಿಸುತ್ತೇನೆ. ಇಲ್ಲಿ ಉಚಿತ ಆಸ್ಪತ್ರೆ ನಿರ್ಮಿಸಿ, ವೃದ್ಧಾಶ್ರಮ, ಅಬಲಾಶ್ರಮ ಬರಲಿ.
ಶಾರದಾ ಪೂಜಾರಿ (ಮಾಜಿ ತಾಪಂ ಸದಸ್ಯೆ): ಕಾಪು ಕ್ಷೇತ್ರಕ್ಕೆ ಉಚಿತ ಕರೆಂಟ್ ನೀಡಿ, ನಮ್ಮ ಊರಿನವರಿಗೇ ಉದ್ಯೋಗ ಸಿಗಲಿ.
ವಿನಯಕುಮಾರ್ ಸೊರಕೆ (ಶಾಸಕರು): ನಾವು ಮೊದಲು ಇದರ ವಿರುದ್ಧ ಹೋರಾಡಿದರೂ, ಈಗ ವಿರೋಧಿಸುತ್ತಿಲ್ಲ. ಆದರೆ ಕಂಪೆನಿ ನೀಡಿದ ಎಲ್ಲಾ ಆಶ್ವಾಸನೆಗಳನ್ನು ಈಡೇರಿಸಬೇಕು.ಕಾಪುಗೆ ಉಚಿತ ಕರೆಂಟ್ ನೀಡಿ. ಸಾಮಾಜಿಕ ಅರಣ್ಯವನ್ನು ಬೆಳೆಸಿ. ಆಸ್ಪತ್ರೆ ನಿರ್ಮಿಸಿಕೊಡಿ. ಮೊದಲು ನೀಡಿದ ಎಲ್ಲಾ ಆಶ್ವಾಸನೆ ಈಡೇರಿಸಿ, ವಿಸ್ತರಣೆ ಮಾತು ನಂತರ.
ಜಯಶ್ರೀ ಹರೀಶ್ ಕೋಟ್ಯಾನ್ (ತೆಂಕ ಗ್ರಾಪಂ ಸದಸ್ಯೆ): ಆಧುನಿಕ ತಂತ್ರಜ್ಞಾನ ಬಳಸಿ, 2ನೇ ಹಂತದಲ್ಲಿ ಭೂಮಿ ಕಳೆದುಕೊಳ್ಳುವವರಿಗೆ ಅಧಿಕ ಪರಿಹಾರ ನೀಡಿ.
ಸೀತಾ ಸುವರ್ಣ (ಮೀನುಗಾರ ಮಹಿಳೆ ತೆಂಕ): ಮೀನುಗಾರ ಮಹಿಳೆಯರಿಗೂ ಪರಿಹಾರ, ಉದ್ಯೋಗ ನೀಡಿ. ನೀರು ಹಾಳಾಗಿದೆ ಅದನ್ನು ಸರಿಪಡಿಸಿ, ಕರೆಂಟ್ ಇಲ್ಲ. 24 ಗಂಟೆ ನೀಡಿ.
ಎಂಜಿ ನಾಗೇಂದ್ರ(ಕುರ್ಕಾಲು): ಹಾರುಬೂದಿ ಸಮಸ್ಯೆ ನಮಗೂ ಇದೆ. ನಮಗೂ ಸಿಎಸ್‌ಆರ್ ನೆರವು ನೀಡಿ.ಅನುದಾನ ನೀಡಿ.
ಗೀತಾಂಜಲಿ ಸುವರ್ಣ, ಮುಂಬಯಿ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಅಧ್ಯಕ್ಷ ಜಯಕೃಷ್ಣ ಶೆಟ್ಟಿ ತೋನ್ಸೆ, ಎಲ್.ವಿ.ಅಮೀನ್, ಧರ್ಮಪಾಲ ದೇವಾಡಿಗ ಮುಂಬಯಿ, ದೇವಿಪ್ರಸಾದ್ ಶೆಟ್ಟಿ ಬೆಳಪು, ಫಾ.ಗೋಮ್ಸ್, ಶರತ್ ಗುಡ್ಡೆಕೊಪ್ಲ, ರೇಶ್ಮಾ ಉದಯ ಶೆಟ್ಟಿ, ಅಂಡಾರು ದೇವಿಪ್ರಸಾದ್ ಶೆಟ್ಟಿ, ಸಾಂತೂರು ಬಾಲಕೃಷ್ಣ ಶೆಟ್ಟಿ ಮುಂತಾದವರು ತಮ್ಮ ಅಭಿಪ್ರಾಯ ನೀಡಿದರು.
ಯುಪಿಸಿಎಲ್ ವಿಸ್ತರಣೆಯ ಮುಖ್ಯ ಅಂಶಗಳು
ಯೋಜನೆಯ ವಿಸ್ತರಣೆಯ ವಿವರಗಳನ್ನು ನೀಡಿದ ಚೆನ್ನಬಸವಣ್ಣ, ಇದರ ಅಂದಾಜು ವೆಚ್ಚ 11,500 ಕೋಟಿ ರೂ.ಗಳಾಗಿದ್ದು, ಉತ್ಪಾದನೆಯಾಗುವ ವಿದ್ಯುತ್‌ನ್ನು ಕರ್ನಾಟಕ ಸರಕಾರಕ್ಕೆ ಸರಬರಾಜು ಮಾಡಲಾಗುವುದು ಎಂದರು. ಇದಕ್ಕಾಗಿ ವರ್ಷಕ್ಕೆ 6.20 ಮಿಲಿಯನ್ ಮೆಟ್ರಿಕ್ ಟನ್ ಕಲ್ಲಿದ್ದಲು ವರ್ಷಕ್ಕೆ ಬೇಕಾಗುತ್ತದೆ. ಘಟಕಗಳಲ್ಲಿ ಶೇ.0.5 ಗಂಧಕ ಹಾಗೂ ಶೇ.25ರಷ್ಟು ಬೂದಿಯನ್ನು ಹೊಂದಿರುವ ಕಲ್ಲಿದ್ದಲು ಬಳಸಲಾಗುವುದು ಎಂದರು.
ಸರಕಾರ ಈಗಾಗಲೇ ಈ ಪ್ರದೇಶದಲ್ಲಿ 3420ಮೆವ್ಯಾನ ಯೋಜನೆಯನ್ನು ರೂಪಿಸಿದೆ. 1330 ಎಕರೆ ಭೂಮಿಯನ್ನು ಯುಪಿಸಿಎಲ್‌ಗೆ ಅಂಗೀಕರಿಸಿದೆ. ಯೋಜನೆಗೆ ವರ್ಷಕ್ಕೆ 126 ಮಿಲಿಯನ್ ಘನ ಮೀಟರ್ ನೀರನ್ನು ಅರಬೀಸಮುದ್ರದಿಂದ ಪಡೆಯಲಾಗುವುದು.
ವಿಸ್ತರಣೆಗೆ ಒಟ್ಟು 730 ಎಕರೆ ಪ್ರದೇಶವನ್ನು ಸ್ವಾಧೀನಪಡಿಸಿಕೊಳ್ಳಲಾಗು ವುದು. ಇವುಗಳಲ್ಲಿ 180 ಎಕರೆ ಪ್ರಮುಖ ಸ್ಥಾವರ, 278 ಎಕರೆ ಬೂದಿ ವಿಲೇವಾರಿಗೆ, 272 ಎಕರೆ ರೈಲ್ವೆಯಾರ್ಡ್, ಮೇರಿಗೋರೌಂಡ್‌ಗಾಗಿ ಬಳಸಲಾಗುವುದು ಎಂದರು.







