ನೋಟು ವಿನಿಮಯ: ಅಂಚೆ ಕಚೇರಿಯಲ್ಲಿ ಗೊಂದಲ

ಉಡುಪಿ, ನ.10: ಹೊಸ ನೋಟುಗಳಿಗಾಗಿ ಹಳೆ ನೋಟುಗಳನ್ನು ವಿನಿ ಮಯ ಮಾಡುವುದಕ್ಕೆ ಸಂಬಂಧಿಸಿದಂತೆ ಉಡುಪಿ ಪ್ರಧಾನ ಅಂಚೆ ಕಚೇರಿ ಯಲ್ಲಿ ಇಂದು ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು.
ಇಂದು ಬೆಳಗ್ಗಿನಿಂದ ಅಂಚೆ ಕಚೇರಿಗೆ ಆಗಮಿಸಿದ ಸಾರ್ವಜನಿಕರು 500ರೂ. ಮತ್ತು 1000 ರೂ. ನೋಟು ಬದಲಾಯಿಸಿಕೊಡುವಂತೆ ಅರ್ಜಿ ಸಲ್ಲಿಸಿದರು. ಆದರೆ ಸಿಬ್ಬಂದಿ ಇನ್ನು ನಮಗೆ ಹಣ ಬಂದಿಲ್ಲ. ಬಂದ ನಂತರ ವಿನಿಮಯ ಮಾಡಿಕೊಳ್ಳುತ್ತೇವೆ. ಸದ್ಯಕ್ಕೆ ಟೋಕನ್‌ಗಳನ್ನು ನೀಡಲಾಗುವುದು ಎಂದು ಉತ್ತರಿಸಿದರು.
ಇದರಿಂದ ಆಕ್ರೋಶಗೊಂಡ ಸಾರ್ವಜನಿಕರು, ಇಂದು ಬೆಳಗ್ಗಿನಿಂದಲೆ ನೋಟು ಬದಲಾವಣೆಗೆ ಅಂಚೆ ಕಚೇರಿಗೆ ಸಂಪರ್ಕಿಸಬಹುದು ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹಾಗೂ ಕೇಂದ್ರ ಸರಕಾರದ ಅಧಿಕೃತ ಪ್ರಕಟಣೆ ತಿಳಿಸಿದೆ. ಆದರೆ ಇಲ್ಲಿ ಹಣವಿಲ್ಲ ಎಂದು ಹೇಳುತ್ತಿರುವುದು ಸರಿಯಲ್ಲ. ನಾವು ನಮ್ಮ ಕೆಲಸಗಳನ್ನು ಬಿಟ್ಟು ಬಂದಿದ್ದೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಳಿಕ ಕಚೇರಿಗೆ ಆಗಮಿಸಿದ ಪೊಲೀಸರು ಸಾರ್ವಜನಿಕ ರನ್ನು ಸಮಾಧಾನ ಪಡಿಸಿದರು.
ಮಧ್ಯಾಹ್ನ ಬಂದ ಹಣ
‘ಉಡುಪಿ ಪ್ರಧಾನ ಅಂಚೆ ಕಚೇರಿಯ ಖಾತೆಗೆ ಹಣ ಬರುವುದು ವಿಳಂಬವಾದುದರಿಂದ ಈ ಗೊಂದಲ ಉಂಟಾಗಿದೆ. ಮಧ್ಯಾಹ್ನ ನಂತರ ಮೊದಲನೆ ಹಂತದಲ್ಲಿ 20ರೂ. ಮತ್ತು 50ರೂ. ಮುಖ ಬೆಲೆಯ 5 ಲಕ್ಷ ರೂ. ಹಣ ಅಂಚೆ ಕಚೇರಿಗೆ ಬಂದಿದೆ. ಮೊದಲು ಟೋಕನ್ ನೀಡಿದವರಿಗೆ ಹಣದ ವಿನಿಮಯ ಮಾಡಿ, ನಂತರ ಬಂದ ಸಾರ್ವ ಜನಿಕರಿಗೂ ಹಣ ವಿನಿಮಯ ಮಾಡಿಕೊಡಲಾಯಿತು ಎಂದು ಅಂಚೆ ಕಚೇರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಬ್ಯಾಂಕುಗಳಲ್ಲೂ ನೂಕುನುಗ್ಗಲು
ಉಡುಪಿ ಜಿಲ್ಲೆಯ ಹೆಚ್ಚಿನ ಬ್ಯಾಂಕ್ ಶಾಖೆಗಳಲ್ಲೂ ಹಣ ವಿನಿಮಯ, ಖಾತೆಗಳಿಗೆ ಹಣಕಟ್ಟಲು ಬಂದ ಜನರಿಂದ ನೂಕುನುಗ್ಗಲು ಉಂಟಾಯಿತು. ಹೆಚ್ಚಿನ ಬ್ಯಾಂಕ್ ಖಾತೆಗಳಿಗೆ ಹಣ ವಿಳಂಬವಾಗಿ ಬಂದುದರಿಂದ ಜನರ ಆಕ್ರೋಶಭರಿತ ನುಡಿಗಳಿಗೆ ಬ್ಯಾಂಕ್ ಸಿಬ್ಬಂದಿ ತುತ್ತಾದರು.
ಹೆಚ್ಚಿನ ಬ್ಯಾಂಕ್ ಶಾಖೆಗಳಲ್ಲಿ 100,50, 20ರೂ.ಗಳ ನೋಟುಗಳು ಬೇಗನೇ ಖಾಲಿಯಾದ ಕಾರಣ ಹೆಚ್ಚಿನ ಗ್ರಾಹಕರು ನಿರಾಶರಾಗಿ ಮರಳಬೇಕಾಯಿತು. ಅಲ್ಲದೇ ವಿನಿಮಯಕ್ಕೆ ಇಂದು ಕೆಲ ಬ್ಯಾಂಕುಗಳಿಗೆ ಹೊಸ 2000ರೂ. ನೋಟುಗಳು ಮಾತ್ರ ಬಂದಿದ್ದು 500ರೂ. ನೋಟು ಗಳು ಬಂದಿರಲಿಲ್ಲ. ತಮ್ಮಲ್ಲಿರುವ ಹಳೆಯ 500 ಹಾಗೂ 1000ರೂ.ನೋಟುಗಳು ಅಪವೌಲ್ಯಗೊಳ್ಳುವ ಮೊದಲೇ ಸಿಕ್ಕಿದ ಮೊದಲ ಅವಕಾಶದಲ್ಲೇ ಅವುಗಳನ್ನು ಬದಲಿಸಿಕೊಳ್ಳಲು ಜನರು ಹಾತೊರೆಯುತ್ತಿರುವುದು ಇಂದಿನ ಜನರ ಆತಂಕಭರಿತ ಮಾತುಗಳಿಂದ ಸ್ಪಷ್ಟವಾಗುತ್ತಿತ್ತು.







