ಪಾಕ್ ವಿರುದ್ಧ ಟೆಸ್ಟ್ ಸರಣಿಗೆ ಕಿವೀಸ್ ತಂಡ ಪ್ರಕಟ
ಮಾರ್ಟಿನ್ ಗಪ್ಟಿಲ್‌ಗೆ ಗೇಟ್‌ಪಾಸ್

ವೆಲ್ಲಿಂಗ್ಟನ್, ನ.10: ಭಾರತದಲ್ಲಿ ನಡೆದ ಟೆಸ್ಟ್ ಹಾಗೂ ಏಕದಿನ ಅಂತಾರಾಷ್ಟ್ರೀಯ ಸರಣಿಗಳಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡಿದ್ದ ನ್ಯೂಝಿಲೆಂಡ್‌ನ ಆರಂಭಿಕ ಬ್ಯಾಟ್ಸ್‌ಮನ್ ಮಾರ್ಟಿನ್ ಗಪ್ಟಿಲ್ ಪಾಕಿಸ್ತಾನ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಯಿಂದ ಹೊರಗುಳಿದಿದ್ದಾರೆ.
ನ್ಯೂಝಿಲೆಂಡ್ ಕ್ರಿಕೆಟ್ ತಂಡದ ಆಯ್ಕೆಗಾರರು ಕೆಲವು ಬದಲಾವಣೆಯನ್ನು ಮಾಡಿದ್ದು, ಆಕ್ಲಂಡ್‌ನ ಯುವ ಬ್ಯಾಟ್ಸ್‌ಮನ್ ಜೀತ್ ರಾವಲ್‌ಗೆ ಅವಕಾಶ ನೀಡಿದ್ದಾರೆ. ಆಲ್‌ರೌಂಡರ್ ಕಾಲಿನ್ ಡಿ ಗ್ರಾಂಡ್‌ಮ್ ಹಾಗೂ 2012ರ ನವೆಂಬರ್‌ನಲ್ಲಿ ಕೊನೆಯ ಟೆಸ್ಟ್ ಆಡಿರುವ ಟಾಡ್ ಆಸ್ಟ್ಲೇ ಅವಕಾಶ ಪಡೆದಿದ್ದಾರೆ. ಲೂಕ್ ರೊಂಚಿ ಹಾಗೂ ಡಾಗ್ ಬ್ರಾಸ್‌ವೆಲ್ ತಂಡದಲ್ಲಿ ಸ್ಥಾನ ಪಡೆದಿಲ್ಲ.
ರಾವಲ್ ದೇಶೀಯ ಕ್ರಿಕೆಟ್‌ನಲ್ಲಿ ಉತ್ತಮ ಫಾರ್ಮ್‌ನಲ್ಲಿದ್ದು, ಫ್ಲಂಕೆಟ್ ಶೀಲ್ಡ್ ಟೂರ್ನಿಯಲ್ಲಿ ಮೂರು ಪಂದ್ಯಗಳಲ್ಲಿ ಒಟ್ಟು 244 ರನ್ ಗಳಿಸಿದ್ದಾರೆ ಅಸ್ಲ್ಟೇ ಕ್ಯಾಂಟರ್‌ಬರಿ ತಂಡದ ಪರ ಸ್ಥಿರ ಪ್ರದರ್ಶನ ನೀಡುತ್ತಿದ್ದು, 3 ಪಂದ್ಯಗಳಲ್ಲಿ 14 ವಿಕೆಟ್‌ಗಳನ್ನು ಕಬಳಿಸಿದ್ದಾರೆ.
ಪಾಕಿಸ್ತಾನ ನ.17 ರಂದು ಕ್ರೈಸ್ಟ್‌ಚರ್ಚ್‌ನಲ್ಲಿ ಆತಿಥೇಯ ಕಿವೀಸ್ ವಿರುದ್ಧ ಮೊದಲ ಪಂದ್ಯವನ್ನು ಆಡಲಿದೆ. ನ.25 ರಂದು ಹ್ಯಾಮಿಲ್ಟನ್‌ನಲ್ಲಿ ದ್ವಿತೀಯ ಟೆಸ್ಟ್‌ನಲ್ಲಿ ಆಡಲಿದೆ.
ನ್ಯೂಝಿಲೆಂಡ್ ತಂಡ: ಕೇನ್ ವಿಲಿಯಮ್ಸನ್(ನಾಯಕ), ಟಾಡ್ ಅಸ್ಟ್ಲೇ, ಟ್ರೆಂಟ್ ಬೌಲ್ಟ್, ಕಾಲಿನ್ ಡಿ ಗ್ರಾಂಡ್‌ಹೊಮ್, ಮ್ಯಾಟ್ ಹೆನ್ರಿ, ಟಾಮ್ ಲಥಾಮ್, ಹೆನ್ರಿ ನಿಕೊಲಸ್, ಜಿಮ್ಮಿ ನೀಶಮ್, ಜೀತ್ ರಾವಲ್, ಟಿಮ್ ಸೌಥಿ, ರಾಸ್ ಟೇಲರ್, ನೀಲ್ ವಾಗ್ನರ್, ಬಿಜೆ ವಾಟ್ಲಿಂಗ್.







