ದೇಶಪ್ರೇಮಿಗಳನ್ನು ಜಾತಿಗೆ ಸೀಮಿತಗೊಳಿಸದಿರಿ: ಮಂಜುನಾಥ್
ಶಿಕಾರಿಪುರ, ನ.10: ಹೈದರಲಿ, ಟಿಪ್ಪು ಸುಲ್ತಾನ್, ಡಾ.ಅಬ್ದುಲ್ ಕಲಾಂ ಮತ್ತಿತರರು ದೇಶಕ್ಕಾಗಿ ಶ್ರಮಿಸಿದ್ದು, ದೇಶಪ್ರೇಮಿಗಳನ್ನು ಕೇವಲ ಜಾತಿಗೆ ಸೀಮಿತಗೊಳಿಸಿ ಅಪಮಾನಿಸಬಾರದೆಂದು ಉಪ ನ್ಯಾಸಕ ಬಿ. ಮಂಜುನಾಥ್ ಮನವಿ ಮಾಡಿದರು.
ಗುರುವಾರ ಪಟ್ಟಣದ ತಾಪಂ ಸಭಾಂಗಣದಲ್ಲಿ ತಾಲೂಕು ಆಡಳಿತ, ತಾಪಂ, ಪುರಸಭೆ, ಹಿಂದುಳಿದ ವರ್ಗಗಳ ಕಲ್ಯಾಣ ಮತ್ತು ಅಲ್ಪಸಂಖ್ಯಾತರ ಇಲಾಖೆ ಗಳ ಸಂಯುಕ್ತಾಶ್ರಯದಲ್ಲಿ ನಡೆದ ಮೈಸೂರು ಹುಲಿ ಟಿಪ್ಪು ಸುಲ್ತಾನ್ ಅವರ ಜನ್ಮ ದಿನಾಚ ರಣೆಯಲ್ಲಿ ವಿಶೇಷ ಉಪನ್ಯಾಸಕರಾಗಿ ಪಾಲ್ಗೊಂಡು ಅವರು ಮಾತನಾಡಿದರು.
ದಾರ್ಶನಿಕರ ಜಯಂತಿಗಳು ಕೇವಲ ಸೀಮಿತ ಸಮು ದಾಯಕ್ಕೆ ಮೀಸಲಾಗುವ ಸಂಕುಚಿತ ಮನೋಸ್ಥಿತಿ ಹೆಚ್ಚಾಗುತ್ತಿದ್ದು, ದೇಶದ ಅಭಿವೃದ್ಧಿಯಲ್ಲಿ ಸರ್ವ ಸಮುದಾಯದ ಸಂತರ, ದಾರ್ಶನಿಕರ ಪಾತ್ರವಿದೆ ಎಂಬ ಸತ್ಯವನ್ನು ಪ್ರತಿಯೊಬ್ಬರೂ ಅರಿಯಬೇಕಾಗಿದೆ. ಸರಕಾರದ ಜಯಂತಿ ಕಾರ್ಯಕ್ರಮದಲ್ಲಿ ಸರ್ವ ಸಮುದಾಯ ಪಾಲ್ಗೊಳ್ಳುವ ವಿಶಾಲ ಮನೋಭಾವನೆಯನ್ನು ಬೆಳೆಸಿಕೊಂಡಲ್ಲಿ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂದು ತಿಳಿಸಿದರು.
ದೇಶದ ರಕ್ಷಣೆಯಲ್ಲಿ ಮಹತ್ವದ ಪಾತ್ರ ವಹಿಸಿರುವ ಮಿಸೈಲ್ ತಂತ್ರಜ್ಞಾನದ ರೂವಾರಿ ಡಾ. ಅಬ್ದುಲ್ ಕಲಾಂ ಅವರಿಗೆ ಟಿಪ್ಪು ಸುಲ್ತಾನ್‌ರ ರಾಕೆಟ್ ಮಾದರಿಯ ಅಸ್ತ್ರ ಮಾದರಿಯಾಗಿದ್ದು, ಸತತ 20 ವರ್ಷಗಳಿಂದ ಭಾರತಕ್ಕೆ ಅಸಾಧ್ಯವಾದ ಮಿಸೈಲ್ ಅಸ್ತ್ರವನ್ನು ಅಬ್ದುಲ್ ಕಲಾಂ ಅಭಿವೃದ್ಧಿಪಡಿಸಿ ನೆರೆಯ ರಾಷ್ಟ್ರಗಳಿಗೆ ದೇಶದ ಬಲಿಷ್ಠತೆ ಬಗ್ಗೆ ಎಚ್ಚರಿಕೆಯ ಸಂದೇಶವನ್ನು ನೀಡಿದ್ದಾರೆ ಎಂದರು.
ಜಾಮಿಯಾ ಮಸ್ಜಿದ್ ಅಧ್ಯಕ್ಷ ಯೂಸುಫ್ ಅಲಿ ಮಾತನಾಡಿ, ಪ್ರತಿ ಸಮುದಾಯದ ದಾರ್ಶನಿಕರ ಜಯಂತಿಯಲ್ಲಿ ಮೆರವಣಿಗೆ, ಬ್ಯಾನರ್, ಫ್ಲೆಕ್ಸ್‌ಗಳಿಗೆ ಅವಕಾಶ ಕಲ್ಪಿಸಿ ಟಿಪ್ಪು ಜಯಂತಿಯಲ್ಲಿ ನಿರಾಕರಿಸುವ ಮೂಲಕ ತಾಲೂಕು ಆಡಳಿತ ತಾರತಮ್ಯ ಎಸಗುತ್ತಿದೆ. ಮುಂದಿನ ಬಾರಿ ಇದೇ ರೀತಿಯಾದಲ್ಲಿ ಜಯಂತಿಯನ್ನು ಬಹಿಷ್ಕರಿಸುವುದಾಗಿ ಎಚ್ಚರಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಜಿಪಂ ಸದಸ್ಯ ನರಸಿಂಗನಾಯ್ಕ ಮಾತನಾಡಿದರು. ಅಧ್ಯಕ್ಷತೆಯನ್ನು ತಹಶೀಲ್ದಾರ್ ಶಿವಕುಮಾರ್ ವಹಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ತಾಪಂ ಇಒ ಲೋಹಿತ್, ಪುರಸಭಾ ಮುಖ್ಯಾಧಿಕಾರಿ ಬಾಲಾಜಿರಾವ್, ಶಿರಾಳಕೊಪ್ಪ ಪಪಂ ಉಪಾಧ್ಯಕ್ಷೆ ರಶೀದಾಬೇಗಂ, ಅಂಜುಮನ್ ಇಸ್ಲಾಮ್ ಸಮಿತಿ ಅಧ್ಯಕ್ಷ ಮುಹಮ್ಮದ್ ಹನೀಫ್, ಉರ್ದು ಸಾಹಿತಿ ಸಾಗರ್ ಕರ್ನಾಟಕಿ, ಮುಖಂಡ ಗೋಣಿ ಮಾಲತೇಶ, ಭಂಡಾರಿ ಮಾಲತೇಶ, ಫಯಾಝ್ ಅಹ್ಮದ್, ಹಬೀಬುಲ್ಲಾ, ಹನೀಫ್‌ಸಾಬ್ ಮತ್ತಿತರರು ಉಪಸ್ಥಿತರಿದ್ದರು.





