ಬ್ಯಾಂಕಿನ ಎಲ್ಲ ಶಾಖೆಗಳಲ್ಲಿ 500, 1000 ರೂ. ಮುಖಬೆಲೆಯ ನೋಟುಗಳ ಸ್ವೀಕಾರ
ಕಾರವಾರ, ನ.10: ಉತ್ತರ ಕನ್ನಡ ಜಿಲ್ಲೆಯ ಸಾರ್ವಜನಿಕರಿಗೆ ರೂ. 500 ಹಾಗೂ 1000 ಮುಖಬೆಲೆಯ ನೋಟುಗಳ ರದ್ದತಿಗೆ ಸಂಬಂಧಿಸಿದಂತೆ ಇರುವ ಸಂದೇಹಗಳನ್ನು ನಿವಾರಿಸಲು ಸಾರ್ವಜನಿಕ ಹಿತಾಸಕ್ತಿಯಂದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಲ್.ಚಂದ್ರಶೇಖರ ನಾಯಕ ಸಾರ್ವಜನಿಕ ಸೂಚನೆಗಳನ್ನು ಪ್ರಕಟಿಸಿದ್ದಾರೆ.
ಭಾರತ ಸರಕಾರ ರೂ. 500 ಹಾಗೂ 1000 ಮುಖಬೆಲೆಯ ನೋಟುಗಳ ಚಲಾವಣೆಯನ್ನು ನ.9ರಿಂದ ರದ್ದುಗೊಳಿಸಿದೆ. ರೂ.100 ಮತ್ತು ಅದಕ್ಕಿಂತ ಕಡಿಮೆ ಮುಖಬೆಲೆಯ ಎಲ್ಲ ನೋಟುಗಳು ಮತ್ತು ನಾಣ್ಯಗಳು ಅಸ್ತಿ
ತ್ವದಲ್ಲಿ ಇರುತ್ತವೆ. ರೂ.500 ಮತ್ತು 1000 ಮುಖಬೆಲೆಯ ನೋಟುಗಳನ್ನು ಬ್ಯಾಂಕಿನ ಎಲ್ಲ ಶಾಖೆಗಳಲ್ಲಿ ಡಿ.30 ರವರೆಗೆ ಸ್ವೀಕರಿಸಲಾಗುವುದು. ಡಿ.30ರ ಬಳಿಕ ನೋಟುಗಳನ್ನು ಭಾರತಿಯ ರಿಸರ್ವ್ ಬ್ಯಾಂಕಿನ ಆಯ್ದ ಶಾಖೆಗಳಲ್ಲಿ ಮಾತ್ರ ಬದಲಾಯಿಸಿಕೊಳ್ಳಬಹುದು ಎಂದು ಅವರು ತಿಳಿಸಿದ್ದಾರೆ. ಒಬ್ಬ ವ್ಯಕ್ತಿ ದಿನಕ್ಕೆ 4 ಸಾವಿರ ಮೌಲ್ಯದ ನೋಟುಗಳನ್ನು ಮಾತ್ರ ಬ್ಯಾಂಕಿನ ಶಾಖೆಗಳಲ್ಲಿ ಬದಲಾಯಿಸಿಕೊಳ್ಳಬಹುದು. ಬ್ಯಾಂಕ್ ಖಾತೆಗೆ ಸದರಿ ನೋಟುಗಳನ್ನು ಜಮಾ ಮಾಡಲು ಯಾವುದೇ ಮಿತಿ ಇರುವುದಿಲ್ಲ. ಇದಕ್ಕಾಗಿ ಸರಕಾರ ನೀಡಿರುವ ಪ್ಯಾನ್‌ಕಾರ್ಡ್, ಮತದಾರರ ಗುರುತಿನ ಚೀಟಿ, ಆಧಾರ ಸಂಖ್ಯೆಯಂತಹ ದಾಖಲೆಗಳನ್ನು ನೀಡುವುದು ಕಡ್ಡಾಯ. ಆದರೆ ಕೆ.ವೈ.ಸಿ. ನಿಬಂಧನೆಗಳನ್ನು ಪೂರೈಸದ ಗ್ರಾಹಕರಿಗೆ ಹಣ ಜಮಾವಣೆ ಮಿತಿಯನ್ನು 50 ಸಾವಿರಕ್ಕೆ ನಿಗದಿ ಮಾಡಲಾಗಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಗ್ರಾಹಕರು ತಮ್ಮ ಅಕೌಂಟ್‌ನಿಂದ ಬ್ಯಾಂಕ್ ಕೌಂಟರ್‌ಗಳಲ್ಲಿ ದಿನವೊಂದಕ್ಕೆ ಗರಿಷ್ಠ 10 ಸಾವಿರ ರೂ. ಮತ್ತು ವಾರವೊಂದರಲ್ಲಿ ಗರಿಷ್ಠ 20 ಸಾವಿರ ರೂ. ಮಾತ್ರ ಪಡೆಯಬಹುದಾಗಿದೆ. ನ.11 ರಿಂದ ಎಲ್ಲ ಎಟಿಎಂಗಳು ಕಾರ್ಯ ನಿರ್ವಹಿಸಲ್ಲಿದ್ದು, ಗ್ರಾಹಕರು ನ.18 ವರೆಗೆ ಒಂದು ಎಟಿಎಂ ಕಾರ್ಡ್‌ನಿಂದ ದಿನವೊಂದಕ್ಕೆ 2 ಸಾವಿರ ರೂ. ಪಡೆಯಬಹುದಾಗಿದೆ. ನ.19 ರಿಂದ ಈ ಮಿತಿಯನ್ನು 4 ಸಾವಿರ ರೂ.ಗೆ ಹೆಚ್ಚಿಸಲಾಗುವುದು ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಚೆಕ್, ಡಿಡಿ, ಕ್ರೆಡಿಟ್ ಕಾರ್ಡ್, ಡೆಬಿಟ್‌ಕಾರ್ಡ್, ಮೊಬೈಲ್ ಬ್ಯಾಂಕಿಂಗ್, ಇಂಟರ್ನೆಟ್ ಬ್ಯಾಂಕಿಂಗ್ ಮೂಲಕ ನಡೆಯುವ ವ್ಯವಹಾರಗಳಲ್ಲಿ ಯಾವುದೇ ವ್ಯತ್ಯಯ ಉಂಟಾಗುವುದಿಲ್ಲ. ಲೀಡ್ ಬ್ಯಾಂಕ್ ದೂರವಾಣಿ ಸಂಖ್ಯೆ 08382 228122 ಹಾಗೂ ಭಾರತೀಯ ರಿಸರ್ವ್ ಬ್ಯಾಂಕ್ ಮುಂಬೈ ದೂರವಾಣಿ ಸಂಖ್ಯೆ 022 2260 2804 ಮತ್ತು 022 2260 2944 ನ್ನು ಸಂಪರ್ಕಿಬಹುದಾಗಿದೆ ಎಂದು ಪ್ರಕಟನೆಯಲ್ಲಿ ಅವರು ತಿಳಿಸಿದ್ದಾರೆ.





