ಮೆದುಳು ನಿಷ್ಕ್ರಿಯಗೊಂಡ ಡಿಎಆರ್ ಸಿಬ್ಬಂದಿಯ ಅಂಗಾಂಗ ದಾನಕ್ಕೆ ನಿರ್ಧಾರ

ಉಡುಪಿ, ನ.10: ಟಿಪ್ಪು ಜಯಂತಿಯ ಹಿನ್ನೆಲೆಯಲ್ಲಿ ಬಂದೋಬಸ್ತ್‌ನಲ್ಲಿದ್ದ ಉಡುಪಿ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಸಿಬ್ಬಂದಿ ಲಾರೆನ್ಸ್ ಸೆಲ್ವರಾಜ್(39) ಎಂಬವರು ನ.9ರಂದು ಮಧ್ಯಾಹ್ನ ವೇಳೆ ಕುಸಿದು ಬಿದ್ದು ಮೆದುಳು ನಿಷ್ಕ್ರಿಯಗೊಂಡಿದ್ದು, ಇದೀಗ ಅವರ ಕುಟುಂಬಸ್ಥರು ಅವರ ಅಂಗಾಂಗಗಳನ್ನು ದಾನ ಮಾಡಲು ಒಪ್ಪಿಗೆ ನೀಡಿದ್ದಾರೆ.
ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಕೇಂದ್ರ ವಸತಿಗೃಹದಲ್ಲಿ ವಾಸವಾಗಿರುವ ಲಾರೆನ್ಸ್ ತೀವ್ರವಾಗಿ ಅಸ್ವಸ್ಥಗೊಂಡು ಕುಸಿದು ಬಿದ್ದ ಪರಿಣಾಮ ಅವರನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಮಣಿಪಾಲ ಆಸ್ಪತ್ರೆಗೆ ಕರೆದು ಕೊಂಡು ಹೋಗಲಾಯಿತು. ಅದಾಗಲೇ ಕೋಮಾ ಸ್ಥಿತಿಗೆ ತೆರಳಿದ್ದ ಅವರ ಮೆದುಳು ನಿಷ್ಕ್ರಿಯಗೊಂಡಿತ್ತು ಎಂದು ವೈದ್ಯರು ತಿಳಿಸಿದರು.
ಆದುದರಿಂದ ಅವರ ಪತ್ನಿ ಹಾಗೂ ತಂದೆ ತಾಯಿಯವರು ಲಾರೆನ್ಸ್ ಅವರ ಅಂಗಾಂಗ ದಾನ ಮಾಡಲು ಒಪ್ಪಿದ್ದಾರೆ. ಅದರಂತೆ ನಾಳೆ ಬೆಳಗ್ಗೆ 6:30ರ ಸುಮಾರಿಗೆ ಝಿರೋ ಟ್ರಾಫಿಕ್ ಮೂಲಕ ಇವರ ಅಂಗಾಂಗವನ್ನು ಮಂಗಳೂರಿನ ಮೂಲಕ ಬೆಂಗಳೂರಿಗೆ ತೆಗೆದುಕೊಂಡು ಹೋಗಲಾಗುತ್ತದೆ. ಸಶಸ್ತ್ರ ಮೀಸಲು ಪಡೆಯ 1999ನೆ ಬ್ಯಾಚ್‌ನ ಕಾನ್‌ಸ್ಟೇಬಲ್ ಆಗಿರುವ ಇವರಿಗೆ ಪತ್ನಿ, ಓರ್ವ ಪುತ್ರ ಹಾಗೂ ಓರ್ವ ಪುತ್ರಿ ಇದ್ದಾರೆ.





