ಟ್ರಂಪ್ ವಿಜಯದಿಂದ ಭಾರತದ ಪ್ರಿಡೇಟರ್ ಡ್ರೋನ್ ಖರೀದಿ ಮಾತುಕತೆಗೆ ತೊಡಕಿಲ್ಲ
ಹೊಸದಿಲ್ಲಿ, ನ.10: ಅಮೆರಿಕದ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್‌ರ ಆಯ್ಕೆಯು ಭಾರತೀಯ ಸಶಸ್ತ್ರ ಸೇನೆಗೆ ಸ್ವದೇಶಿ ನಿರ್ಮಿತ ಪ್ರಿಡೇಟರ್ ಡ್ರೋನ್‌ಗಳ ಮಾರಾಟದ ಸಂಬಂಧ ಅಮೆರಿಕ ಹಾಗೂ ಭಾರತದ ನಡುವಣ ಮಾತುಕತೆಯ ಮೇಲೆ ಯಾವುದೇ ಪರಿಣಾಮ ಬೀರುವ ಸಾಧ್ಯತೆಯಿಲ್ಲವೆನ್ನಲಾಗಿದೆ.
ಸದ್ಯದ ಮಟ್ಟಿಗೆ, ಅಮೆರಿಕದ ನಿರ್ಗಮನ ರಕ್ಷಣಾ ಕಾರ್ಯದರ್ಶಿ ಆ್ಯಶ್ಟನ್ ಕಾರ್ಟರ್ ಡಿಸೆಂಬರ್‌ನಲ್ಲಿ ಭಾರತಕ್ಕೆ ಭೇಟಿ ನೀಡುವ ಕಾರ್ಯಕ್ರಮ ಬದಲಾಗದೆಂದು ಎನ್‌ಡಿಟಿವಿಗೆ ತಿಳಿದುಬಂದಿದೆ.
ಕಾರ್ಟರ್ ಭೇಟಿಯ ವೇಳೆ ಉಭಯ ದೇಶಗಳು ಕರಾವಳಿ ಕಾವಲಿಗಾಗಿ 22 ಶಸ್ತ್ರಾಸ್ತ್ರ ರಹಿತ ಪ್ರಿಡೇಟರ್ ಬಿ ಗಾರ್ಡಿಯನ್ ಡ್ರೋನ್‌ಗಳ ಮಾರಾಟದ ಕುರಿತು ಚರ್ಚಿಸುವ ನಿರೀಕ್ಷೆಯಿದೆ. ಕಾರ್ಟರ್ ಭೇಟಿಯ ದಿನಾಂಕ ಕೆಲವೇ ದಿನಗಳಲ್ಲಿ ಅಂತಿಮಗೊಳ್ಳುವ ಸಾಧ್ಯತೆಯಿದೆ. ರಕ್ಷಣಾ ಸಚಿವ ಮನೋಹರ್ ಪಾರಿಕ್ಕರ್ ಈ ವರ್ಷ ಆಗಸ್ಟ್‌ನಲ್ಲಿ ಅವರನ್ನು ಭೇಟಿಯಾಗಿದ್ದರು. ಆ ವೇಳೆ ಭಾರತವು ಡ್ರೋನ್ ಖರೀದಿಸುವ ಕುರಿತಾದ ಮಾತುಕತೆಯನ್ನು ಮುಂದಕ್ಕೊಯ್ಯಲಾಗಿತ್ತು.
ಭಾರತವು ಕ್ಷಿಪಣಿ ತಂತ್ರಜ್ಞಾನ ನಿಯಂತ್ರಣ ವಲಯಕ್ಕೆ ಜೂನ್‌ನಲ್ಲಿ ಸೇರ್ಪಡೆಯಾದುದು ಹಾಗೂ ಅಮೆರಿಕವು ಭಾರತವನ್ನು ‘ಮಹತ್ವದ ರಕ್ಷಣಾ ಭಾಗಿದಾರಿ’ ಯೆಂದು ಘೋಷಿಸಿರುವುದು ಮಾತುಕತೆ ಪ್ರಗತಿಯಾಗಲು ಮುಖ್ಯ ಕಾರಣವಾಗಿದೆ.





