44ಜಾನುವಾರುಗಳ ಹೊಟ್ಟೆ ಸೇರುತ್ತಿರುವ ಕಂದಮ್ಮಗಳ ಪೌಷ್ಟಿಕ ಆಹಾರ!
‘ಬಹುಧಾನ್ಯ ನ್ಯೂಟ್ರಿಮಿಕ್ಸ್’ ತಯಾರಿಕೆಯಲ್ಲಿ ಲೋಪ ದೂರುಗಳು ಬಂದರೂ ಅಧಿಕಾರಿಗಳು ವೌನ

ಬಂಟ್ವಾಳ, ನ.10: ತಯಾರಿಕೆಯಲ್ಲಿ ಉಂಟಾಗುತ್ತಿರುವ ಲೋಪದಿಂದಾಗಿ ಕಂದಮ್ಮಗಳ ಹೊಟ್ಟೆ ಸೇರಬೇಕಾದ ಬಹು ಪೌಷ್ಟಿಕಾಂಶವನ್ನು ಹೊಂದಿರುವ ‘ಬಹುಧಾನ್ಯ ನ್ಯೂಟ್ರಿಮಿಕ್ಸ್’ ಜಾನುವಾರುಗಳ ಹೊಟ್ಟೆ ಸೇರುತ್ತಿದೆ.
ಅಂಗನವಾಡಿಗಳ ಮೂಲಕ ವಿತರಿಸಲ್ಪಡುವ ನ್ಯೂಟ್ರಿಮಿಕ್ಸ್, ಕಹಿ ಹಾಗೂ ಘಾಟು ಬರುವುದರಿಂದ ಮಕ್ಕಳು ತಿನ್ನುತ್ತಿಲ್ಲ. ಹಾಗಾಗಿ ಅದನ್ನು ಮನೆಗೆ ಕೊಂಡೊಯ್ಯಲು ಪೋಷಕರು ನಿರಾಕರಿಸುತ್ತಾರೆ. ಅಂಗನವಾಡಿ ಸಿಬ್ಬಂದಿ ಒತ್ತಾಯದಿಂದ ಪೋಷಕರ ಕೈಗೆ ನೀಡುತ್ತಾರಾದರೂ ನ್ಯೂಟ್ರಿಮಿಕ್ಸ್ ಮಾತ್ರ ಮಕ್ಕಳ ಹೊಟ್ಟೆ ಸೇರದೆ ಜಾನುವಾರುಗಳಿಗೆ ಆಹಾರವಾಗುವುದೇ ಹೆಚ್ಚು! ನ್ಯೂಟ್ರಿಮಿಕ್ಸನ್ನು 6 ತಿಂಗಳಿನಿಂದ 3 ವರ್ಷದವರೆಗಿನ ಮಕ್ಕಳಲ್ಲಿನ ಅಪೌಷ್ಟಿಕತೆಯನ್ನು ದೂರ ಮಾಡಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಂಗನವಾಡಿಗಳ ಮೂಲಕ ಇದನ್ನು ಉಚಿತವಾಗಿ ವಿತರಣೆ ಮಾಡುತ್ತಿದೆ.
ಈ ಪೌಷ್ಟಿಕ ಆಹಾರವನ್ನು ಆರು ತಿಂಗಳಿನಿಂದ 1 ವರ್ಷದವರೆಗಿನ ಮಕ್ಕಳಿಗೆ ಹಾಲಿನಲ್ಲಿ ಅಥವಾ ನೀರಿನಲ್ಲಿ ಕಲಸಿ ಹಾಗೂ 1ರಿಂದ ಮೂರು ವರ್ಷದ ಮಕ್ಕಳಿಗೆ ಉಂಡೆಯ ರೂಪದಲ್ಲಿ ನೀಡುವಂತದ್ದು. ಒಂದು ಕೆ.ಜಿ. ತೂಕದ ಪ್ಯಾಕೇಟ್‌ಗಳಲ್ಲಿ ಬರುವ ಇದನ್ನು ಮಗುವೊಂದಕ್ಕೆ ತಿಂಗಳಿಗೆ ಮೂರು ಕಿಲೋದಂತೆ ಸರಕಾರ ವಿತರಣೆ ಮಾಡುತ್ತದೆ. ತಯಾರಿಕೆಯಲ್ಲಿ ಲೋಪ:
ನ್ಯೂಟ್ರಿಮಿಕ್ಸ್ ತಯಾರಿಸುವಾಗ ಉಂಟಾಗುತ್ತಿರುವ ಲೋಪವೇ ಮಕ್ಕಳು ತಿನ್ನದಿರಲು ಕಾರಣ ಎಂದು ಪೋಷಕರು ಆರೋಪಿಸಿದ್ದಾರೆ. ನಿಯಮದಂತೆ ಗೋಧಿ, ಅಕ್ಕಿ, ಹೆಸರುಕಾಳು, ಕಡಲೆಯನ್ನು ಸರಿಯಾಗಿ ಹುರಿದು ಮತ್ತೆ ಮಿಶ್ರಣ ಮಾಡಬೇಕು. ಆದರೆ ಈಗ ಸರಬರಾಜಾಗುತ್ತಿರುವ ನ್ಯೂಟ್ರಿಮಿಕ್ಸ್‌ನಲ್ಲಿ ಗೋಧಿ ಹಾಗೂ ಅಕ್ಕಿಯನ್ನು ನಿಗದಿತ ಪ್ರಮಾಣದಲ್ಲಿ ಹುರಿಯುತ್ತಿಲ್ಲ. ಹಸಿಹಸಿಯಾಗಿರುವುದರಿಂದ ಆಹಾರದ ರುಚಿ ಕಹಿಯಾಗಿ ಮಾರ್ಪಡುತ್ತದೆ. ನಾಲ್ಕು ತಿಂಗಳು ಬಳಸಬಹುದು ಎಂದು ಪ್ಯಾಕೇಟ್‌ನಲ್ಲಿ ಉಲ್ಲೇಖವಿದ್ದರೂ, ಹತ್ತೇ ದಿನದಲ್ಲಿ ಅದರ ಘಾಟು ಬದಲಾಗುತ್ತದೆ. ಹೀಗಾಗಿ ಅದನ್ನು ಬಳಸಲು ಪೋಷಕರು ಇಷ್ಟಪಡುತ್ತಿಲ್ಲ ಎಂದು ದೂರುತ್ತಾರೆ ಅಂಗನವಾಡಿ ಕಾರ್ಯಕರ್ತರು. ಇಲಾಖೆಯಿಂದ ಅಂಗನವಾಡಿಗೆ ಪೂರೈಕೆಯಾಗುತ್ತದೆ. ಅದನ್ನು 6ರಿಂದ 3 ವರ್ಷದ ಮಕ್ಕಳಿರುವ ಪೋಷಕರಿಗೆ ಕೊಡುತ್ತೇವೆ. ಆದರೆ ಮಕ್ಕಳು ತಿನ್ನುವುದಿಲ್ಲ. ನಮಗದು ಬೇಡ ಎಂದು ಪೋಷಕರು ತೆಗೆಯಲು ನಿರಾಕರಿಸುತ್ತಾರೆ. ಬಂದದ್ದು ಖಾಲಿಯಾಗಬೇಕಲ್ಲ. ಹಾಗಾಗಿ ಪೋಷಕರಿಗೆ ಒತ್ತಾಯದಿಂದ ನೀಡುತ್ತೇವೆ. ಕೆಲವರು ಅದನ್ನು ಬಿಸಾಡಿದರೆ ಇನ್ನು ಹೆಚ್ಚಿನವರು ಅದನ್ನು ದನ ಇರುವವರಿಗೆ ನೀಡುತ್ತಾರೆ ಎಂದು ತಾಲೂಕಿನ ಹೇಳಲಿಚ್ಚಿ ಸದ ಅಂಗನವಾಡಿ ಕಾರ್ಯಕರ್ತೆಯೊಬ್ಬರು ಪ್ರತಿಕ್ರಿಯಿಸಿದ್ದಾರೆ. ಅಂಗನವಾಡಿಯಿಂದ ಆರಂಭದಲ್ಲಿ ವಿತರಣೆಯಾಗುತ್ತಿದ್ದ ಬಹುಧಾನ್ಯ ನ್ಯೂಟ್ರಿಮಿಕ್ಸ್ ಪರಿಮಳ, ರುಚಿಯಾಗಿದ್ದವು. ಆದರೆ ಇತ್ತೀಚಿನ ದಿನಗಳಲ್ಲಿ ವಿತರಣೆಯಾಗುತ್ತಿರುವ ನ್ಯೂಟ್ರಿಮಿಕ್ಸ್ ತುಂಬಾ ಕಹಿಯಾಗಿದ್ದು, ಪರಿಮಳ ಎಂಬುದು ಇಲ್ಲವೇ ಇಲ್ಲ. ಹೀಗಾಗಿ ಮಕ್ಕಳು ಅದನ್ನು ತಿನ್ನುತ್ತಿಲ್ಲ. ಕೆಲವು ದಿನ ಮನೆಯಲ್ಲಿಟ್ಟು ಮತ್ತೆ ಬಿಸಾಡುತ್ತಿದ್ದೇವೆ ಎಂದು ಕಳೆದ ಹಲವು ಸಮಯಗಳಿಂದ ಪೋಷಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಈ ಕುರಿತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳ ಗಮನ ಸೆಳೆಯುತ್ತಲೇ ಇದ್ದೇವೆ. ಆದರೆ ಯಾವುದೇ ಬದಲಾವಣೆ ಕಾಣುತ್ತಿಲ್ಲ. ಮತ್ತೆ ಮತ್ತೆ ಅದೇ ರುಚಿಯ ನ್ಯೂಟ್ರಿಮಿಕ್ಸ್ ಅಂಗನವಾಡಿಗಳಿಗೆ ಸರಬರಾಜಾಗುತ್ತಿವೆ ಎಂದು ಅಂಗನವಾಡಿ ಸಿಬ್ಬಂದಿಯರು ಆರೋಪಿಸಿದ್ದಾರೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವತಿಯಿಂದ ಜಿಲ್ಲೆಯ ಪ್ರತಿ ತಾಲೂಕಿನಲ್ಲಿ ಕಾರ್ಯಾಚರಿಸುತ್ತಿರುವ ತಯಾರಿಕಾ ಘಟಕಗಳಲ್ಲಿ ಈ ಬಹುಧಾನ್ಯ ನ್ಯೂಟ್ರಿಮಿಕ್ಸ್ ಅನ್ನು ತಯಾರಿಸಲಾಗುತ್ತಿದೆ. ತಯಾರಿಕೆಯಲ್ಲಿ ಉಂಟಾಗುತ್ತಿರುವ ಲೋಪವನ್ನು ತಯಾರಿ ಘಟಕದಲ್ಲೇ ಬದಲಾಯಿಸಿ ಮಕ್ಕಳಿಗೆ ಇಷ್ಟವಾಗುವ ಹಾಗೆ ರುಚಿಯನ್ನು ನೀಡಿದರೆ ಮಕ್ಕಳಿಗೆ ಪೌಷ್ಟಿಕ ಆಹಾರ ನೀಡಬೇಕೆನ್ನುವ ಸರಕಾರದ ಉದ್ದೇಶವೂ ಈಡೇರುತ್ತದೆ.ಸರಕಾರಕ್ಕೆಆಗುತ್ತಿರುವ ಕೋಟ್ಯಂತರ ರೂಪಾಯಿ ನಷ್ಟ ಕೂಡಾ ತಪ್ಪುತ್ತದೆ.
ಯಾವುದಕ್ಕೂ ಈ ಬಗ್ಗೆ ಇಲಾಖೆಯ ಅಧಿಕಾರಿಗಳು ಮನಸ್ಸು ಮಾಡಬೇಕು.
ಧಾನ್ಯಗಳ ಸೋರಿಕೆ?
ಬಹುಧಾನ್ಯ ನ್ಯೂಟ್ರಿಮಿಕ್ಸ್ ಪೂರೈಕೆಯಾಗುವ ಧಾನ್ಯಗಳು ಸೋರಿಕೆಯಾಗುತ್ತಿದೆ ಎಂಬ ಆರೋಪವೂ ಸಾರ್ವಜನಿಕರಿಂದ ಕೇಳಿ ಬಂದಿದೆ. ನ್ಯೂಟ್ರಿಮಿಕ್ಸ್‌ಗೆ ಬಳಸುವ ಗೋಧಿ, ಅಕ್ಕಿ, ಹೆಸರುಕಾಳು, ಹುರಿಗಡಲೆ, ಸಕ್ಕರೆ ಮತ್ತು ಏಲಕ್ಕಿಗಳಲ್ಲಿ ಹೆಸರುಕಾಳು, ಹುರಿಗಡಲೆ, ಸಕ್ಕರೆ, ಏಲಕ್ಕಿ ತಯಾರಿಕಾ ಘಟಕದಿಂದ ಅಥವಾ ಪೂರೈಕೆಯಾಗುವ ಸಂದರ್ಭದಲ್ಲಿ ಸೋರಿಕೆಯಾಗುತ್ತಿದೆ ಎನ್ನಲಾಗಿದೆ. ಹೀಗಾಗಿ ನಿಗದಿತ ಪ್ರಮಾಣದಲ್ಲಿ ಹೆಸರುಕಾಳು, ಹುರಿಗಡಲೆ, ಸಕ್ಕರೆ, ಏಲಕ್ಕಿ ಮಿಶ್ರಣಕ್ಕೆ ಬಳಕೆಯಾಗದೆ ಹೆಚ್ಚಿನ ಪ್ರಮಾಣದಲ್ಲಿ ಗೋಧಿ ಮತ್ತು ಅಕ್ಕಿ ಬಳಕೆಯಾಗುತ್ತಿರುವುದರಿಂದ ನ್ಯೂಟ್ರಿಮಿಕ್ಸ್ ಆಹಾರ ಕಹಿಯಾಗಿರುತ್ತದೆ ಎಂದು ಆರೋಪಗಳು ಕೇಳಿ ಬರುತ್ತಿದೆಯಾದರೂ ಅದರಲ್ಲಿ ಸತ್ಯ ಎಷ್ಟು ಎಂಬುದನ್ನು ಅಧಿಕಾರಿಗಳೇ ತನಿಖೆ ನಡೆಸಬೇಕಾಗಿದೆ.
ಪ್ರತಿ ತಾಲೂಕಿನಲ್ಲಿ ಆಯಾಯ ತಿಂಗಳು ಬೇಡಿಕೆ ಇರುವಷ್ಟು ಮಾತ್ರ ತಯಾರಿಸಲಾಗುತ್ತಿದೆ. ತಯಾರಿಸುತ್ತಿರುವವರೆಲ್ಲ ಶ್ರೀಶಕ್ತಿ ಗುಂಪಿನ ಮಹಿಳೆಯರು. ಆದರೆ ಗೋಧಿ ಮತ್ತು ಅಕ್ಕಿಯನ್ನು ನಿಗದಿತ ಪ್ರಮಾಣದಲ್ಲಿ ಹುರಿಯದಿರುವುದರಿಂದ ಆಹಾರ ಕಹಿಯಾಗಿ ಮಕ್ಕಳು ಸೇವಿಸುತ್ತಿಲ್ಲ ಎಂಬ ದೂರು ಜಿಲ್ಲೆಯ ವಿವಿಧೆಡೆ ಬಂದಿದೆ. ಈ ಹಿನ್ನೆಲೆಯಲ್ಲಿ ತಯಾರಿಕಾ ಘಟಕದ ಎಲ್ಲರ ಸಭೆ ಕರೆದು ನಿಗದಿತ ಪ್ರಮಾಣದಲ್ಲಿ ಹುರಿಯುವಂತೆ ಸ್ಪಷ್ಟ ನಿರ್ದೇಶನ ನೀಡಲಾಗಿದೆ.
- ಸುಂದರ ಪೂಜಾರಿ, ಜಿಲ್ಲಾ ಉಪ ನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ







