ನೋಟು ರದ್ದಿಗೆ ಮುನ್ನ 3 ಕೋಟಿ ಬ್ಯಾಂಕಿಗೆ ಹಾಕಿದ ಪಶ್ಚಿಮ ಬಂಗಾಳ ಬಿಜೆಪಿ!
ಭುಗಿಲೆದ್ದ ವಿವಾದ

ಕೊಲ್ಕತ್ತಾ, ನ.12 : ಪ್ರಧಾನಿ ನರೇಂದ್ರ ಮೋದಿಯವರು, 500 ಹಾಗೂ 1000 ರೂಪಾಯಿ ನೋಟುಗಳನ್ನು ಚಲಾವಣೆಯಿಂದ ರದ್ದುಪಡಿಸುವ ನಿರ್ಧಾರ ಪ್ರಕಟಿಸುವ ಎಂಟು ದಿನ ಮುನ್ನ ಬಿಜೆಪಿ ಪಶ್ಚಿಮ ಬಂಗಾಳ ಘಟಕ 3 ಕೋಟಿ ರೂಪಾಯಿಗಳನ್ನು ಬ್ಯಾಂಕಿಗೆ ಪಾವತಿ ಮಾಡಿರುವುದು ವಿವಾದ ಎಬ್ಬಿಸಿದೆ. ಪ್ರಧಾನಿ ಭಾಷಣದ ಕೆಲವೇ ಕ್ಷಣಗಳ ಮುನ್ನ 40 ಲಕ್ಷ ರೂಪಾಯಿಗಳನ್ನು ಬಿಜೆಪಿ ರಾಜ್ಯ ಘಟಕದ ಬ್ಯಾಂಕಿಗೆ ಜಮಾ ಮಾಡಿರುವ ಅಂಶ ಇದೀಗ ಬಹಿರಂಗವಾಗಿದೆ.
ಆದರೆ ಇವೆರಡರ ನಡುವೆ ಸಂಬಂಧ ಕಲ್ಪಿಸುವುದು ಬೇಡ ಎಂದು ಬಿಜೆಪಿ ಹೇಳಿಕೊಂಡಿದೆ. ನವೆಂಬರ್ 19ರಂದು ಒಂದು ವಿಧಾನಸಭಾ ಕ್ಷೇತ್ರ ಹಾಗೂ ಎರಡು ಲೋಕಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯುವ ಹಿನ್ನೆಲೆಯಲ್ಲಿ ಈ ತಯಾರಿ ಮಾಡಿಕೊಂಡಿತ್ತು ಎನ್ನುವುದು ವಿರೋಧ ಪಕ್ಷಗಳ ಆರೋಪ. ಇಂಡಿಯನ್ ಬ್ಯಾಂಕಿನ ಸೆಂಟ್ರಲ್ ಅವೆನ್ಯೂ ಶಾಖೆಯಲ್ಲಿ ಈ ಠೇವಣಿ ಮಾಡಿರುವುದನ್ನು ಬ್ಯಾಂಕ್ ಶಾಖೆ ದೃಢಪಡಿಸಿದೆ. ಸಿಪಿಎಂ ಮುಖವಾಣಿ ಗಣಶಕ್ತಿಯಲ್ಲಿ ಪ್ರಕಟವಾದ ವರದಿಯ ಪ್ರಕಾರ, ಬಿಜೆಪಿ ನವೆಂಬರ್ 8ರಂದು 60 ಲಕ್ಷ ಮತ್ತು 40 ಲಕ್ಷ ರೂಪಾಯಿಗಳನ್ನು ಬ್ಯಾಂಕಿಗೆ ಪಾವತಿಸಿದೆ. ಮೊದಲ ಪಾವತಿಯನ್ನು ಉಳಿತಾಯ ಖಾತೆಗೆ ಮಾಡಿದ್ದು, ಎರಡನೇ ಬಾರಿ ರಾತ್ರಿ 8 ಗಂಟೆಗೆ ಜಮಾ ಮಾಡಲಾಗಿದೆ. ಎಲ್ಲವೂ 500 ಹಾಗೂ 1000 ರೂಪಾಯಿ ನೋಟುಗಳು ಎಂದು ವರದಿ ಹೇಳಿದೆ.
ಬಿಜೆಪಿ ಘಟಕ ಹೊಂದಿರುವ ಇತರ ಖಾತೆಗಳಿಗೆ 75 ಲಕ್ಷ ಹಾಗೂ 1.25 ಕೋಟಿ ರೂಪಾಯಿಯನ್ನು ನವೆಂಬರ್ 1 ಹಾಗೂ 5ರಂದು ಜಮಾ ಮಾಡಲಾಗಿದೆ. ಬಿಜೆಪಿ ಪದಾಧಿಕಾರಿಗಳಿಗೆ ಈ ಸುದ್ದಿ ಮೊದಲೇ ಗೊತ್ತಾಗಿರುವ ಸಾಧ್ಯತೆ ಇದ್ದು, ದೇಶಾದ್ಯಂಥ ಇಂಥ ತಂತ್ರ ಹೂಡಿ ಕಪ್ಪು ಹಣವನ್ನು ಪರಿವರ್ತಿ ಸಿಕೊಂಡಿರಬೇಕು ಎಂಬ ಶಂಕೆಯನ್ನು ಸಿಪಿಎಂ ರಾಜ್ಯ ಕಾರ್ಯದರ್ಶಿ ಸೂರ್ಯಕಾಂತ ಮಿಶ್ರ ವ್ಯಕ್ತಪಡಿಸಿದ್ದಾರೆ. ಆದರೆ ಬಿಜೆಪಿ ಅಧ್ಯಕ್ಷ ದಿಲೀಪ್ ಘೋಷ್ ಇದನ್ನು ನಿರಾಕರಿಸಿದ್ದಾರೆ.
ಈ ಮಧ್ಯೆ ಪ್ರಧಾನಿ, ಆಯ್ದ ವ್ಯಕ್ತಿಗಳಿಗೆ ಈ ಮಾಹಿತಿಯನ್ನು ಮೊದಲೇ ಸೋರಿಕೆ ಮಾಡಿದ್ದರು ಎಂದು ಕಾಂಗ್ರೆಸ್ ಪಕ್ಷ ಆಪಾದಿಸಿದೆ. ಹೀಗೆ ದುರ್ಲಾಭ ಪಡೆದಿರುವ ವ್ಯಕ್ತಿಗಳ ಹೆಸರು ಬಹಿರಂಗಪಡಿಸಬೇಕು ಎಂದು ಕಾಂಗ್ರೆಸ್ ವಕ್ತಾರ ಆನಂದ ಶರ್ಮಾ ದೂರಿದ್ದಾರೆ. ಅಕ್ಟೋಬರ್ 20ರ ಬಳಿಕ 5 ಲಕ್ಷಕ್ಕಿಂತ ಅಧಿಕ ಮೌಲ್ಯದ ಚಿನ್ನ ಖರೀದಿಸಿದ ಹಾಗೂ ವಿದೇಶಿ ವಿನಿಮಯ ಮತ್ತು ಷೇರುಗಳಲ್ಲಿ ತೊಡಗಿಸಿದವರ ವಿವರ ಬಹಿರಂಗಪಡಿಸಲಿ ಎಂದು ಸವಾಲು ಹಾಕಿದ್ದಾರೆ.







