ಬಿಹಾರದಲ್ಲಿ ಹಿಂದಿ ದೈನಿಕದ ಪತ್ರಕರ್ತನ ಹತ್ಯೆ

ರೋತಾಸ್, ನ.12: ಹಿಂದಿ ದೈನಿಕದ ವರದಿಗಾರನನ್ನು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಬಿಹಾರದ ರೋತಾಸ್ ಜಿಲ್ಲೆಯ ಸಾಸರಾಮ್ ಎಂಬಲ್ಲಿ ಇಂದು ಬೆಳಗ್ಗೆ ನಡೆದಿದೆ.
ಹಿಂದಿ ಪತ್ರಿಕೆ ದೈನಿಕ್ ಭಾಸ್ಕರ‍್ ನ ವರದಿಗಾರ ಧರ್ಮೆಂದ್ರ ಸಿಂಗ್ ಅವರನ್ನು ಮನೆಯ ಸಮೀಪ ದುಷ್ಕರ್ಮಿಗಳು ಗುಂಡು ಹಾರಿಸಿ ಕೊಲೆಗೈದು ಪರಾರಿಯಾಗಿದ್ದಾರೆ.
ಧರ್ಮೆಂದರ‍್ ಸಿಂಗ್ ಮನೆಯ ಸಮೀಪದ ಅಮ್ರಾ ಲೇಕ್ ಎಂಬಲ್ಲಿರುವ ಟೀ ಸ್ಟಾಲ್ ಬಳಿ ನಿಂತಿದ್ದಾಗ ಅಲ್ಲಿಗೆ ಬೈಕ್ ನಲ್ಲಿ ಆಗಮಿಸಿದ ಮೂವರು ದುಷ್ಕರ್ಮಿಗಳು ಅವರ ಮೇಲೆ ಗುಂಡಿನ ಮಳೆಗೆರೆದು ಪರಾರಿಯಾದರೆನ್ನಲಾಗಿದೆ.
ಗಾಯಗೊಂಡ ಸಿಂಗ್ ಅವರನ್ನು ತಕ್ಷಣ ಸ್ಥಳೀಯರು ಸಾಸರಾಮ್ ನಲ್ಲಿರುವ ಸಾದರ‍್ ಆಸ್ಪತ್ರೆಗೆ ದಾಖಲಿಸಿದರು. ಅಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ವಾರಣಾಶಿಗೆ ಕರೆದೊಯ್ಯುತ್ತಿರುವಾಗ ಅವರು ದಾರಿಮಧ್ಯೆ ಮೃತಪಟ್ಟರು ಎಂದು ವರದಿ ತಿಳಿಸಿದೆ. ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





