ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಲ್ಲಿ 'ವೈಫೈ' ಸಂಪರ್ಕಕ್ಕೆ ಚಾಲನೆ

ಮಂಗಳೂರು, ನ.12: ದೇಶದ 400 ‘ಎ’ ಮತ್ತು ‘ಎ1’ ರೈಲು ನಿಲ್ದಾಣಗಳಿಗೆ ಕಲ್ಪಿಸಲಾಗುತ್ತಿರುವ ವೈಫೈ ಸಂಪರ್ಕದ ಪೈಕಿ ಮಂಗಳೂರಿನ ಸೆಂಟ್ರಲ್ ರೈಲು ನಿಲ್ದಾಣದಲ್ಲಿ ರಾಜ್ಯದಲ್ಲೇ ಪ್ರಥಮ ಬಾರಿಗೆ ವೈಫೈ ಸೇವೆಗೆ ಶನಿವಾರ ಸಂಸದ ನಳಿನ್ ಕುಮಾರ್ ಕಟೀಲ್ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ಈ ವರ್ಷ 100 ರೈಲು ನಿಲ್ದಾಣಗಳಲ್ಲಿ ವೈಫೈ ಸಂಪರ್ಕ ಕಲ್ಪಿಸುತ್ತಿದ್ದು, ಈಗಾಗಲೇ ಕೇರಳದ 5 ಕಡೆ ಆರಂಭಿಸಲಾಗಿದೆ. ಬೆಳೆಯುತ್ತಿರುವ ಮಂಗಳೂರು ನಗರದಲ್ಲಿ ಸಮಾಜದ ಎಲ್ಲ ಸ್ತರದ ಜನರ ಅನುಕೂಲಕ್ಕಾಗಿ ವೈಫೈ ಆರಂಭಿಸಲಾಗಿದೆ ಎಂದು ಹೇಳಿದರು.
ರೈಲು ನಿಲ್ದಾಣದ ವೈಫೈ ಸಂಪರ್ಕಕ್ಕೆ ಗೂಗಲ್ ಪಾಲುದಾರ ಸಂಸ್ಥೆಯಾಗಿದೆ. ರೇಲೆಟೆಲ್ ಸಂಸ್ಥೆ ಅನುಷ್ಠಾನಕ್ಕೆ ತರುತ್ತಿದೆ.ಸಾಮಾಜಿಕ ಜಾಲತಾಣ ಕ್ರಾಂತಿ ಮಾಡುತ್ತಿರುವ ಈ ಕಾಲದಲ್ಲಿ ನಿಲ್ದಾಣದಲ್ಲಿ ಕಾಯುವ ಸಂದರ್ಭ ಗ್ರಾಹಕರು ಉಚಿತವಾಗಿ ಇದನ್ನು ಬಳಸಿಕೊಳ್ಳಬಹುದು ಎಂದು ಅವರು ತಿಳಿಸಿದರು.
ಶಾಸಕ ಜೆ.ಆರ್.ಲೋಬೊ ಮಾತನಾಡಿ, ಆಧುನಿಕ ಯುಗದಲ್ಲಿ ಮಂಗಳೂರಿನಲ್ಲಿ ಪ್ರಥಮ ಹಂತದಲ್ಲೆ ವೈಫೈ ಸಂಪರ್ಕ ನೀಡಿರುವುದು ರೈಲ್ವೆ ಇಲಾಖೆಯ ಮಹತ್ವದ ಹೆಜ್ಜೆ. ಇದರಿಂದ ಸಾಫ್ಟ್‌ವೇರ್ ಎಂಜಿನಿಯರ್ ಸೇರಿದಂತೆ ಜನಸಮಾನ್ಯರೂ ಪ್ರಯೋಜನ ಪಡೆಯಬಹುದು ಎಂದರು.







