ಯುಎಇ ಕಾರ್ಮಿಕ ವೀಸಾ: ಭಾರತೀಯರಿಗೆ ಶುಭ ಸುದ್ದಿ

ಅಬುಧಾಬಿ, ನ. 12: ಯುಎಇ ಕಾರ್ಮಿಕ ವೀಸಾ ಇನ್ನು ಯುಎಇ ಕಾನ್ಸುಲೇಟ್ ಮೂಲಕ ಭಾರತದಲ್ಲಿಯೇ ನೀಡುವ ವ್ಯವಸ್ಥೆ ಆರಂಭಗೊಂಡಿದೆ ಎಂದು ವರದಿಯಾಗಿದೆ. ಬುಧವಾರದಿಂದ ಇದು ಪ್ರಾರಂಭಗೊಂಡಿದೆ. ಅಕ್ಟೋಬರ್‌ನಲ್ಲಿ ತಿರುವನಂತಪುರಂನಲ್ಲಿ ಯುಎಇ ಕಾನ್ಸುಲೇಟ್ ಆರಂಭಿಸಿರುವ ಹಿನ್ನೆಲೆಯಲ್ಲಿ ಕೇರಳದ ಉದ್ಯೋಗಾಕಾಂಕ್ಷಿಗಳು ತಿರುವನಂತಪುರಂಗೆ ಹೋಗಿ ವೀಸಾ ಪಡೆಯಲು ಸಾಧ್ಯ. ವೀಸಾದಲ್ಲಿ ವಂಚನೆ ನಡೆಯುವುದನ್ನು ತಡೆಯಲು ಈ ಪ್ರಕ್ರಿಯೆ ಉಪಯುಕ್ತವೆನಿಸಲಿದೆ ಎಂಬ ನಿರೀಕ್ಷೆ ಇದೆ.
ಮೊದಲು ಕಾರ್ಮಿಕವೀಸಾಕ್ಕೆ ಅರ್ಜಿ ಸಲ್ಲಿಸುವ ಸ್ಪೊನ್ಸರ್(ಪ್ರಾಯೋಜಕ)ಗೆ ಕಂಪೆನಿಗಳು ಕಾರ್ಮಿಕರ ಎಂಟ್ರಿ ಪರ್ಮಿಟ್ ನೀಡುತ್ತಿದ್ದವು. ಈ ಎಂಟ್ರಿಪರ್ಮಿಟ್ ಅಥವಾ ಅದರ ಕಾಪಿಯನ್ನು ಊರಲ್ಲಿರುವ ಉದ್ಯೋಗಾಂಕ್ಷಿಗಳಿಗೆ ಕಳುಹಿಸಿಕೊಟ್ಟು ಅದನ್ನುಹಿಡಿದು ಕೊಂಡು ಕೆಲಸ ಪಡೆಯುವ ಅಭ್ಯರ್ಥಿಗಳು ಯುಎಇಗೆ ಬರುತ್ತಿದ್ದರು. ಆದರೆ ಹೊಸ ರೀತಿ ಪ್ರಕಾರ ಸ್ಪೋನ್ಸರ್(ಪ್ರಾಯೋಜಕ)ಗೆ ಎಂಟ್ರಿಫರ್ಮಿಟ್ ಬದಲಾಗಿ ರೆಫರೆನ್ಸ್ ಕಾರ್ಡ್ ನಂಬರನ್ನು ನೀಡಲಾಗುತ್ತದೆ ಎಂದು ರಾಸಲ್‌ಖೈಮದ ಟ್ರಾವೆಲ್ ಏಜೆನ್ಸಿಯೊಂದರ ಅಧಿಕಾರಿ ತಿಳಿಸಿದ್ದಾರೆಂದು ವೆಬ್‌ಪೋರ್ಟಲೊಂದು ವರದಿಮಾಡಿದೆ.





