ನ್ಯಾ. ಸಂತೋಷ್ ಹೆಗ್ಡೆಯವರ ಈ ಆಗ್ರಹ ರಾಜಕೀಯ ಪಕ್ಷಗಳಿಗೆ ಪಥ್ಯವಾಗದು!
ಪಕ್ಷಗಳಿಗೆ ದೇಣಿಗೆ

ಅಧಿಕ ಮೌಲ್ಯದ ಕರೆನ್ಸಿಯನ್ನು ಅಮಾನ್ಯ ಮಾಡಿರುವ ಸರ್ಕಾರದ ನೀತಿಯನ್ನು ಪ್ರಶಂಸಿಸಿದ ಮಾಜಿ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಎನ್ ಸಂತೋಷ್ ಹೆಗ್ಡೆ ಅವರು, ಸರ್ಕಾರ ಇನ್ನು ವಿದೇಶಿ ಬ್ಯಾಂಕ್‌ಗಳಲ್ಲಿರುವ ಕಪ್ಪು ಹಣವನ್ನೂ ವಾಪಸು ತರಲು ಕ್ರಮ ಕೈಗೊಳ್ಳಬೇಕು ಮತ್ತು ರಾಜಕೀಯ ಪಕ್ಷಗಳಿಗೆ ನಗದು ಅನುದಾನ ನೀಡುವುದನ್ನು ತಡೆಯಬೇಕು ಎಂದು ಹೇಳಿದ್ದಾರೆ.
"ಸರ್ಕಾರದ ನಿರ್ಧಾರಕ್ಕೆ ನನ್ನ ಬೆಂಬಲವಿದೆ. ಪ್ರತೀ ನಿರ್ಧಾರದಲ್ಲಿ ಅದರದ್ದೇ ಆದ ಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಆದರೆ ಅದಕ್ಕಾಗಿ ನಾವು ಕಪ್ಪು ಹಣ ಹರಿದಾಡುವುದಕ್ಕೆ ಅವಕಾಶ ಕೊಡಬೇಕು ಎಂದಲ್ಲ. ರೂ. 500 ಮತ್ತು 1000ದ ನೋಟುಗಳನ್ನು ಅಮಾನ್ಯ ಮಾಡಿರುವುದರಷ್ಟೇ ವಿದೇಶದಲ್ಲಿರುವ ಕಪ್ಪು ಹಣವನ್ನು ಹಿಂದಕ್ಕೆ ತರುವುದೂ ಮುಖ್ಯ"ಎಂದು ಸಂತೋಷ್ ಹೆಗ್ಡೆ ಹೇಳಿದ್ದಾರೆ. ಹೆಗ್ಡೆ ಅವರು ಅಣ್ಣಾ ಹಝಾರೆಯವರು ಭ್ರಷ್ಟಾಚಾರದ ವಿರುದ್ಧ ನಡೆಸಿದ ಚಳವಳಿಯ ಮುಖ್ಯಭಾಗವಾಗಿದ್ದರು. "ದೊಡ್ಡ ಪ್ರಮಾಣದ ಕಪ್ಪು ಹಣ ದೇಶದ ಹೊರಗಿದೆ. ಭಾರತದಲ್ಲಿರುವಷ್ಟೇ ಅಥವಾ ಅದಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿದೆ. ರಿಯಲ್ ಎಸ್ಟೇಟ್ ವ್ಯವಹಾರಗಳಲ್ಲಿ ಮುಖ್ಯವಾಗಿ ದೊಡ್ಡ ಮೊತ್ತದ ಕಪ್ಪುಹಣ ಕೈ ಬದಲಾಗುತ್ತದೆ. ಇದು ಉತ್ತಮ ನಡೆ. ನಮ್ಮ ಹಣಕಾಸು ಭದ್ರತೆ ಇದರಿಂದ ಸುಧಾರಿಸಲಿದೆ. ಈ ಹೆಜ್ಜೆಯನ್ನು ನಾನು ಪ್ರಶಂಸಿಸುವೆ" ಎಂದು ಕರ್ನಟಕದ ಮಾಜಿ ಲೋಕಾಯುಕ್ತರಾಗಿದ್ದ ಸಂತೋಷ್ ಹೆಗ್ಡೆ ಹೇಳಿದ್ದಾರೆ.
"ಪ್ರಧಾನಿ ವಿದೇಶದಲ್ಲಿರುವ ಕಪ್ಪು ಹಣವನ್ನು ವಾಪಸು ತರಲು ಕ್ರಮ ಕೈಗೊಂಡಿದ್ದೇನೆ ಎಂದು ಹೇಳಿದ್ದರೂ ವಿಶೇಷವಾದ ಕ್ರಮವಾಗಿಲ್ಲ" ಎಂದಿದ್ದಾರೆ. "ನೋಟುಗಳನ್ನು ಅಮಾನ್ಯ ಮಾಡಿರುವುದು ಮುಂಬರುವ ಉತ್ತರ ಪ್ರದೇಶ ಮತ್ತು ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳ ಮೇಲೆ ಪರಿಣಾಮ ಬೀರಲಿದೆ" ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಅದೇ ಸಂದರ್ಭದಲ್ಲಿ ರಾಜಕೀಯ ಪಕ್ಷಗಳಿಗೆ ನಗದು ಅನುದಾನ ನೀಡುವುದನ್ನೂ ತಡೆಯುವುದು ಉತ್ತಮ ನೀತಿಯಾಗಲಿದೆ ಎಂದೂ ಅವರು ಹೇಳಿದ್ದಾರೆ. ಅಂತಹ ಅನುದಾನಗಳಿಗೆ ಪಾನ್ ಮತ್ತು ಆಧಾರ್ ಸಂಖ್ಯೆಯನ್ನು ಕಡ್ಡಾಯ ಮಾಡಬೇಕು. ಹೀಗೆ ಮಾಡಿದರೆ ಆದಾಯ ತೆರಿಗೆ ಇಲಾಖೆ ಅನುದಾನದ ಮೂಲವನ್ನು ಕಂಡುಕೊಳ್ಳುವುದು ಸುಲಭವಾಗುತ್ತದೆ. ಅಲ್ಲದೆ ಸುಳ್ಳು ಹೆಸರುಗಳಿಂದ ಅನುದಾನಗಳನ್ನು ಕೊಡುವುದು ತಡೆಯಬಹುದು. ಇಂತಹ ಕಪ್ಪು ಹಣ ವ್ಯವಹಾರಗಳನ್ನು ತಡೆಯಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅವರು ಹೇಳಿದ್ದಾರೆ.
ಕಪ್ಪು ಹಣ ಸಂಪೂರ್ಣವಾಗಿ ಉಪಯೋಗವಿಲ್ಲದ ಸ್ಥಿತಿ ಬರಲು ಕ್ರಮ ಕೈಗೊಳ್ಳಬೇಕು ಎಂದು ಹೆಗ್ಡೆ ಹೇಳಿದ್ದಾರೆ.
ಕೃಪೆ: hindustantimes.com







