ಯಾಸಿರ್ ಅರಫಾತ್ ಮ್ಯೂಸಿಯಂ ಆರಂಭ

ರಮಲ್ಲಾ, ನ. 12: ಫೆಲೆಸ್ತೀನಿ ನೇತಾರ ದಿವಂಗತ ಯಾಸಿರ್ ಅರಫಾತ್‌ರ ಸ್ಮರಣೆಗಾಗಿ ಕಟ್ಟಿಸಲಾದ ಮ್ಯೂಸಿಯಂ ಆರಂಭಗೊಂಡಿದೆ ಎಂದು ವರದಿಯಾಗಿದೆ. ಅವರ ಹನ್ನೆರಡನೆ ಪುಣ್ಯತಿಥಿ ಒಂದು ದಿನ ಉಳಿದಿರುವಾಗಲೇ ಫೆಲೆಸ್ತೀನ್ ಅಧ್ಯಕ್ಷರ ವಸತಿಯ ಪ್ರಾಂಗಣದಲ್ಲಿ ಕಟ್ಟಿಸಿದ ಮ್ಯೂಸಿಯಂನ್ನು ಚಾಲನೆಗೊಳಿಸಲಾಗಿದೆ. ಅವರ ಮರಣದವರೆಗಿನ 20ನೆ ಶತಮಾನದ ಫೆಲಸ್ತೀನ್‌ನಲ್ಲಿ ಸಂಭವಿಸಿದ ಪ್ರತಿಯೊಂದೂ ಘಟನೆಗಳನ್ನು ಮ್ಯೂಸಿಯಂನಲ್ಲಿ ಚಿತ್ರಿಸಲಾಗಿದೆ.
70ಲಕ್ಷ ಡಾಲರ್ ಖರ್ಚಿನಲ್ಲಿ ನಿರ್ಮಿಸಲಾದ ಯೋಜನೆಯ ನಿರ್ಮಾಣ ಕಾರ್ಯವನ್ನು 2010ರಲ್ಲಿ ಆರಂಭಿಸಲಾಗಿತ್ತು. ಯಾಸಿರ್ ಅರಫಾತ್‌ಗೆ ಲಭಿಸಿದ ನೊಬೆಲ್ ಪಾರಿತೋಷಕ, ಅವರು ಬಳಸುತ್ತಿದ್ದ ಕೋವಿ, ಕಫಿಯ್ಯ(ತಲೆಯಲ್ಲಿ ಧರಿಸುತ್ತಿದ್ದ ವಸ್ತು), ಟವೆಲ್ ಇತ್ಯಾದಿ ಕೂಡಾ ಮ್ಯೂಸಿಯಂನಲ್ಲಿರಿಸಲಾಗಿದೆ ಎಂದು ಯಾಸಿರ್ ಅರಫಾತ್ ಫೌಂಡೇಶನ್ ಚೇರ್‌ಮೆನ್ ನಸೀರ್ ಅಲ್‌ಕಿದ್ವ ಹೇಳಿದ್ದಾರೆ.
2004ರ ನವೆಂಬರ್ 11ಕ್ಕೆ ಫ್ರಾನ್ಸ್‌ನ ಸೇನಾಸ್ಪತ್ರೆಯಲ್ಲಿ ಅರಫಾತ್ ನಿಧನಹೊಂದಿದ್ದರು. ಮೂರು ವರ್ಷಗಳ ಇಸ್ರೇಲಿ ದಿಗ್ಬಂಧನದಿಂದಾಗಿ ರೋಗ ಉಲ್ಬಣಿಸಿದ್ದರಿಂದ ಅವರನ್ನು ಫ್ರಾನ್ಸ್‌ನ ಸೈನಿಕ ಆಸ್ಪತ್ರೆಗೆ ಸೇರಿಸಲಾಗಿತ್ತು ಎಂದು ವರದಿ ತಿಳಿಸಿದೆ.





