ಆತ್ಮಹತ್ಯೆಗೈದ ನ್ಯಾಯಾಧೀಶರ ದೇಹದಲ್ಲಿ ಲಾಠಿಯಲ್ಲಿ ಹೊಡೆದ, ಬೂಟಿನಿಂದ ತುಳಿದ ಗುರುತು ಪತ್ತೆ
ಸುಳ್ಯ ಪೊಲೀಸರ ವಿರುದ್ದ ಪ್ರಕರಣ ದಾಖಲು

ಮಂಜೇಶ್ವರ,ನ.12 : ಕಾಸರಗೋಡು ಪ್ರಥಮ ದರ್ಜೆ ನ್ಯಾಯಾಧೀಶ ವಿ ಕೆ ಉಣ್ಣಿಕೃಷ್ಣನ್ (45) ಸಾವು ಪ್ರಕರಣಕ್ಕೆ ಸಂಬಂಧಿಸಿ ವಿದ್ಯಾನಗರ ಪೊಲೀಸರು ತನಿಖೆಯನ್ನು ಇನ್ನಷ್ಟು ತೀವೃಗೊಳಿಸಿದ್ದಾರೆ.
ಮರಣೋತ್ತರ ಪರೀಕ್ಷೆ ಬಳಿಕ ಲಭಿಸಿದ ವರದಿಯಲ್ಲಿ ಲಾಠಿಯಲ್ಲಿ ಹೊಡೆದ ಹಾಗು ಬೂಟಿನಿಂದ ತುಳಿದ ಹಲವು ಗುರುತುಗಳು ಪತ್ತೆಯಾಗಿರುವುದಾಗಿ ತಿಳಿಸಲಾಗಿದೆ.
ತಾನು ಸುಳ್ಯಕ್ಕೆ ಹೋಗಿದ್ದ ವೇಳೆ ಅಲ್ಲಿ ಕೆಲವರು ನನಗೆ ಹಲ್ಲೆ ನಡೆಸಿದ್ದು, ಈ ಮಧ್ಯೆ ತನ್ನನ್ನು ಸುಳ್ಯ ಠಾಣೆಗೆ ಕೊಂಡೊಯ್ದಾಗ ಅಲ್ಲಿಯ ಪೊಲೀಸರು ಮಾರಣಾಂತಿಕ ಹಲ್ಲೆ ನಡೆಸಿರುವುದಾಗಿಯೂ ನಗರದ ಸಿ ಐ ಗೂ ಉಣ್ಣಿಕೃಷ್ಣನ್ ದೂರು ನೀಡಿದ್ದರು. ಬಳಿಕ ನಗರದ ಖಾಸಗಿ ಆಸ್ಪತ್ರೆಯೊಂದರಲ್ಲಿ ದಾಖಲಾಗಿ ಚಿಕಿತ್ಸೆ ಪಡೆದಿದ್ದರು. ಅವರ ದೇಹದಲ್ಲಿ ಸುಮಾರು 15 ರಷ್ಟು ಗಾಯದ ಗುರುತುಗಳು ಪತ್ತೆಯಾಗಿವೆ. ಸೊಂಟದಿಂದ ಕೆಳಗೆ ಬೂಟಿನಿಂದ ತುಳಿದ ಮತ್ತು ಲಾಠಿಯಿಂದ ಹೊಡೆದ ಗುರುತುಗಳೂ ಮೃತದೇಹದಲ್ಲಿ ಪತ್ತೆಯಾಗಿರುವುದಾಗಿ ಮರಣೋತ್ತರ ಪರೀಕ್ಷಾ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಸುಳ್ಯ ಠಾಣೆಯ ಒಬ್ಬ ಸಬ್‌ಇನ್ಸ್‌ಪೆಕ್ಟರ್ ಹಾಗೂ ಪೊಲೀಸ್ ಪೇದೆಯ ವಿರುದ್ದ ದೂರು ದಾಖಲಾಗಿದೆ. ಆರೋಪಿಗಳು ಯಾರೆಂಬುದನ್ನು ಹೆಸರಿಸಲಾಗಿಲ್ಲವಾದರೂ ಹಲ್ಲೆ ನಡೆದ ದಿನ ಕರ್ತವ್ಯದಲ್ಲಿದ್ದ ಎಸ್ ಐ ಹಾಗೂ ಪೇದೆಯ ವಿರುದ್ದ ದೂರು ದಾಖಲಾಗುವ ಸಾಧ್ಯತೆ ಇದೆ. ಪರೀಕ್ಷಾ ವರದಿ ಕೈ ಸೇರಿದ ಬಳಿಕ ಅದನ್ನು ಪರಿಸೀಲಿಸಿ ಮುಂದಿನ ಕ್ರಮ ಕೈಗೊಳಲಾಗುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.





