ಗೋವಾ ನಿವಾಸಿ ಬಾಲಕಿಯನ್ನು ಮನೆ ಕೆಲಸಕ್ಕೆ ನಿಲ್ಲಿಸಿ ಕಿರುಕುಳ: ಮೂರು ಮಂದಿ ವಿರುದ್ಧ ಪ್ರಕರಣ ದಾಖಲು
ಮಂಜೇಶ್ವರ,ನ.12 : ಗೋವಾ ನಿವಾಸಿ ಬಾಲಕಿಯನ್ನು ಕಾಸರಗೋಡಿಗೆ ಕರೆತಂದು ಮನೆ ಕೆಲಸಕ್ಕೆ ನಿಲ್ಲಿಸಿ ಶಾರೀರಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ಮೂರು ಮಂದಿ ವಿರುದ್ಧ ಕಾಸರಗೋಡು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಎರಿಯಾಲ್ ಬ್ಲಾರ್ಕೋಡ್ ನಿವಾಸಿ ನಬೀಸ, ಈಕೆಯ ಸಂಬಂಧಿಕ ಮರಿಯುಮ್ಮ, ಅಬ್ದುಲ್ ಮಜೀದ್ ಎಂಬವರ ವಿರುದ್ಧ ದೂರು ದಾಖಲಿಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ವರ್ಷಗಳ ಹಿಂದೆ ಬಾಲಕಿಯನ್ನು ಗೋವಾದಿಂದ ಕಾಸರಗೋಡಿಗೆ ಕರೆ ತಂದು ಮನೆಯೊಂದರಲ್ಲಿ ಕೆಲಸಕ್ಕೆ ನಿಲ್ಲಿಸಲಾಗಿತ್ತು. ಈ ಮಧ್ಯೆ ಮನೆಯವರು ನೀಡುತ್ತಿದ್ದ ಶಾರೀರಿಕ ಕಿರುಕುಳ ಸಹಿಸಲಾಗದೆ ಬಾಲಕಿ 2014 ಅಕ್ಟೋಬರ್ 11ರಂದು ಮನೆಯಿಂದ ತಪ್ಪಿಸಿಕೊಂಡು ಕಾಸರಗೋಡು ರೈಲು ನಿಲ್ದಾಣಕ್ಕೆ ತಲುಪಿದ್ದಳು.
ರೈಲು ನಿಲ್ದಾಣದಲ್ಲಿ ಬಾಲಕಿಯನ್ನು ಪೊಲೀಸರು ಕಸ್ಟಡಿಗೆ ತೆಗೆದು ಚೈಲ್ಡ್‌ಲೈನ್ ಗೆ ಹಸ್ತಾಂತರಿಸಿದ್ದು ಬಳಿಕ ಪರವನಡ್ಕದ ಮಹಿಳಾ ಮಂದಿರದಲ್ಲಿರಿಸಲಾಗಿತ್ತು. ಈ ವೇಳೆ ತೃಕರಿಪುರ ನಿವಾಸಿಯಾದ ದಂಪತಿ ಬಾಲಕಿಯನ್ನು ಕಾನೂನು ಪ್ರಕಾರ ದತ್ತು ತೆಗೆದುಕೊಂಡಿದ್ದರು. ಬಳಿಕ ಬಾಲಕಿಗೆ ನಿತ್ಯ ತಲೆನೋವು ಸಹಿತ ಅಸೌಖ್ಯ ಕಾಣಿಸಿಕೊಂಡಿತ್ತು. ಇದರಿಂದ ಆಸ್ಪತ್ರೆಗೆ ತೆರಳಿ ತಪಾಸಣೆಗೈದಾಗ ತಲೆಯೊಳಗೆ ಗಾಯವುಂಟಾಗಿದ್ದು, ಇದು ಹಲ್ಲೆಯ ಪರಿಣಾಮವಾಗಿರಬಹುದೆಂದು ತಜ್ಞರು ತಿಳಿಸಿದ್ದಾರೆ. ಈ ಹಿಂದೆ ಬಾಲಕಿ ಕಾಸರಗೋಡಿನಲ್ಲಿ ಕೆಲಸಕ್ಕೆ ನಿಂತಿದ್ದ ಮನೆಯವರು ನಡೆಸಿದ ಹಲ್ಲೆಯಿಂದ ಉಂಟಾದ ಗಾಯವಾಗಿರಬಹುದೆಂದು ಸಂಶಯಿಸಲಾಗಿದೆ. ಈ ಬಗ್ಗೆ ದಂಪತಿ ಚೈಲ್ಡ್‌ಲೈನ್ ಗೆ ವಿಷಯ ತಿಳಿಸಿದ್ದರು. ಇದರಂತೆ ಚೈಲ್ಡ್‌ಲೈನ್ ನೀಡಿದ ದೂರಿನಂತೆ ಪೊಲೀಸರು ಇದೀಗ ಮೂವರ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.







