ಉಳ್ಳಾಲ ಹಝ್ರತ್ ಶಾಲೆಯಲ್ಲಿ ರಾಷ್ಟ್ರೀಯ ಶಿಕ್ಷಣ ದಿನಾಚರಣೆ

ಉಳ್ಳಾಲ,ನ.12: ವಿದ್ಯಾರ್ಥಿಗಳು ಕಲಿತು ಉದ್ಯೋಗಕ್ಕೆ ಸೇರಿದ ಬಳಿಕ ಕಲಿಯುವುದನ್ನು ಮರೆಯುತ್ತಾರೆ, ಆದರೆ ಶಿಕ್ಷಕರು ನಿರಂತರ ಕಲಿಕೆಯಲ್ಲಿ ಮುಂದುವರಿಯುತ್ತಾರೆ ಎಂದು ಮಂಗಳೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಪ್ರೊ.ಪಿ.ಎಲ್.ಧರ್ಮ ಅಭಿಪ್ರಾಯಪಟ್ಟರು. ದೇಶದ ಪ್ರಥಮ ಶಿಕ್ಷಣ ಮಂತ್ರಿ ಮೌಲಾನ ಅಬುಲ್ ಕಲಾಂ ಆಝಾದ್ ಜನ್ಮದಿನದ ಪ್ರಯುಕ್ತ ಶನಿವಾರ ಸಯ್ಯದ್ ಮದನಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಉಳ್ಳಾದಲ್ಲಿರುವ ಹಝ್ರತ್ ಸಯ್ಯದ್ ಮದನಿ ಆಂಗ್ಲಮಾಧ್ಯಮ ಶಾಲೆಯಲ್ಲಿ ನಡೆದ ಶಿಕ್ಷಣ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು.
ಶಿಕ್ಷಣ ಕ್ಷೇತ್ರ ಎಂದರೆ ಬೆಳಗ್ಗೆ ಶಾಲೆಗೆ ಬಂದು ವಿದ್ಯಾರ್ಥಿಗಳಿಗೆ ಕೇವಲ ಪಾಠ ಮಾಡಿ ಸಂಜೆ ಮನೆಗೆ ಹೋಗುವುದಲ್ಲ, ಬದಲು ಸುತ್ತಮುತ್ತಲಿನ ಎಲ್ಲಾ ವ್ಯವಸ್ಥೆಗಳ ಬಗ್ಗೆ ಅರ್ಥೈಸಿ ತಿಳಿಸಬೇಕು ಎನ್ನುವುದು ಅಬುಲ್ ಕಲಾಂ ಅವರ ಮಾತನಾಗಿತ್ತು. ಸ್ವಾತಂತ್ರ್ಯಪೂರ್ವದಲ್ಲಿ ಕೆಲವೇ ಮಂದಿ ಅತ್ಯಂತ ಸುಂದರವಾಗಿ ಆಂಗ್ಲಭಾಷೆ ಮಾತನಾಡುತ್ತಿದ್ದು, ಅವರ ಪೈಕಿ ಅಪ್ಪಟ ಭಾರತೀಯನಾಗಿದ್ದ ಅಬುಲ್ ಕಲಾಂ ಭಾಷೆಯಲ್ಲಿ ಅತ್ಯಂತ ಶ್ರೇಷ್ಠತೆಯಿತ್ತು, ಮಾತಿಗೆ ಮರುಪ್ರಶ್ನೆ ನೀಡುವವರಿರಲಿಲ್ಲ, ಅಂತಹ ಮಾತುಗಾರಿಕೆ ಶಿಕ್ಷಕನಿಗಿರಬೇಕು ಎಂದು ತಿಳಿಸಿದರು. ಅಧ್ಯಕ್ಷತೆ ವಹಿಸಿದ್ದ ಸಯ್ಯದ್ ಮದನಿ ದರ್ಗಾ ಅಧ್ಯಕ್ಷ ಅಬ್ದುಲ್ ರಶೀದ್, ಶಿಕ್ಷಕರು ಎಂದರೆ ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆ ಬುದ್ಧಿ ಹೇಳಿ ತಿದ್ದುವ ಮುಖಾಂತರ ಸಮಾಜದಲ್ಲಿ ಉತ್ತಮ ಪ್ರಜೆಗಳನ್ನು ಸೃಷ್ಟಿಸುವವರು. ಆದರೆ ದರ್ಗಾ ಅಧೀನದಲ್ಲಿ ಕೆಲಸ ಮಾಡುತ್ತಿರುವ ಶಿಕ್ಷಕರು ಅತ್ಯಂತ ಕನಿಷ್ಟ ವೇತನಕ್ಕೆ ದುಡಿಯುವ ಮೂಲಕ ಅಕ್ಷರಧಾರೆ ಎರೆದು ಸಮಾಜದಲ್ಲಿ ಬದ್ಧತೆ ಪ್ರದರ್ಶಿಸುತ್ತಿದ್ದಾರೆ. ತಮ್ಮ ತ್ಯಾಗಕ್ಕೆ ಒಂದಲ್ಲ ಒಂದು ದಿನ ಪ್ರತಿಫಲ ಸಿಗುವುದರಲ್ಲಿ ಸಂಶಯವಿಲ್ಲ ಎಂದರು.
ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಎಲ್ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ವಿಶೇಷ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳನ್ನು ಹಾಗೂ ಆಯಾ ವಿಭಾಗ ಶಿಕ್ಷಕರನ್ನು ಪುರಸ್ಕರಿಸಲಾಯಿತು.
ಉಳ್ಳಾಲ ನಗರಭಾಧ್ಯಕ್ಷ ಹುಸೈನ್ ಕುಂಞಿಮೋನು, ಪೆರ್ಮನ್ನೂರು ಸಂತ ಸೆಬಾಸ್ತಿಯ್ನ ಚರ್ಚ್ ಧರ್ಮಗುರು ಫಾ.ಜೆ.ಬಿ.ಸಲ್ದಾನ, ಉಳ್ಳಾಲ ಮೊಗವೀರ ಸಂಘದ ಮಾಜಿ ಅಧ್ಯಕ್ಷ ಸದಾನಂದ ಬಂಗೇರ, ಕ್ಷೇತ್ರ ಶಿಕ್ಷಣಾಧಿಕಾರಿ ಜ್ಞಾನೇಶ್, ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ನಳಿನ್, ದರ್ಗಾ ಸಮಿತಿ ಕಾರ್ಯದರ್ಶಿ ಮಹಮ್ಮದ್ ತ್ವಾಹ, ಕೋಶಾಧಿಕಾರಿ ಯು.ಕೆ.ಇಲ್ಯಾಸ್, ಚಾರಿಟೇಬಲ್ ಟ್ರಸ್ಟ್ ಉಪಾಧ್ಯಕ್ಷ ಯು.ಇಬ್ರಾಹಿಂ, ಕೋಶಾಧಿಕಾರಿ ಹಮೀದ್, ಜೊತೆ ಕಾರ್ಯದರ್ಶಿ ಆಸಿಫ್ ಅಬ್ದುಲ್ಲಾ, ಅನುದಾನಿತ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಕೆ.ಎಂ.ಕೆ.ಮಂಜನಾಡಿ ಮೊದಲಾದವರು ಉಪಸ್ಥಿತರಿದ್ದರು.
ಟ್ರಸ್ಟ್ ಕಾರ್ಯದರ್ಶಿ ಮಹಮ್ಮದ್ ಅಫ್ತಾಬ್ ಹುಸೈನ್ ಸ್ವಾಗತಿಸಿದರು. ವಿದ್ಯಾರ್ಥಿ ಸಬೀಬ್ ಕಿರಾಅತ್ ಪಠಿಸಿದರು. ಟಿಪ್ಪು ಸುಲ್ತಾನ್ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಎಂ.ಎಚ್.ಮಲಾರ್ ಪುರಸ್ಕೃತರ ಹೆಸರು ವಾಚಿಸಿದರು. ಟ್ರಸ್ಟ್ ಜೊತೆ ಕಾರ್ಯದರ್ಶಿ ಎ.ಕೆ.ಮೊಯಿದ್ದೀನ್ ಕಾರ್ಯಕ್ರಮ ನಿರೂಪಿಸಿದರು.







