ಎಟಿಎಂ ವ್ಯವಸ್ಥೆ ಸರಿಹೊಂದಲು ಮೂರು ವಾರ ಬೇಕು: ಅರುಣ್ ಜೇಟ್ಲಿ

ಹೊಸದಿಲ್ಲಿ, ನ.12: ಅಧಿಕ ವೌಲ್ಯದ ನೋಟುಗಳನ್ನು ಪಡೆಯಲು ಬ್ಯಾಂಕ್‌ಗಳಿಗೆ ಧಾವಿಸಬೇಡಿ. ಹೊಸ ಕರೆನ್ಸಿ ನೋಟುಗಳನ್ನು ಎಟಿಎಂಗಳಿಗೆ ಅಳವಡಿಸುವ ಕಾರ್ಯ ಪೂರ್ಣಗೊಳ್ಳಲು ಇನ್ನೂ 2ರಿಂದ 3 ವಾರ ಸಮಯ ಬೇಕಾಗುತ್ತದೆ ಎಂದು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲೀ ತಿಳಿಸಿದ್ದಾರೆ.
ತರಾತುರಿಯಿಂದ 500 ಮತ್ತು 1000 ರೂ. ಮುಖಬೆಲೆಯ ನೋಟುಗಳನ್ನು ಕೇಂದ್ರ ಸರಕಾರ ಅಮಾನ್ಯಗೊಳಿಸಿದ ಬಳಿಕ ದೇಶದಾದ್ಯಂತ ಜನರಲ್ಲಿ ಕಳೆದ ಮೂರು ದಿನಗಳಿಂದ ಕಂಡು ಬಂದಿರುವ ಗೊಂದಲ, ಗಡಿಬಿಡಿ ಮತ್ತು ಹತಾಶೆಯ ಹಿನ್ನೆಲೆಯಲ್ಲಿ ಜೇಟ್ಲೀ ಈ ಹೇಳಿಕೆ ನೀಡಿದ್ದಾರೆ. ನೋಟು ಬದಲಿಸಲು ಹೊಸ 500 ಮತ್ತು 1000 ರೂ. ಮುಖಬೆಲೆಯ ನೋಟುಳನ್ನು ಎಟಿಎಂ ಮೂಲಕ ವಿತರಿಸಲಾಗುತ್ತಿಲ್ಲ ಎನ್ನುವ ಟೀಕೆಗೆ ಪ್ರತಿಕ್ರಿಯಿಸಿದ ಜೇಟ್ಲೀ, ಹೊಸ ನೋಟುಗಳನ್ನು ಎಟಿಎಂಗೆ ಸರಿಹೊಂದಿಸುವ ಪ್ರಕ್ರಿಯೆಯನ್ನು ಈ ಮೊದಲೇ ಮಾಡಿದ್ದರೆ , ಗೌಪ್ಯತೆ ಕಾಯ್ದುಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ ಮತ್ತು ಇದರಿಂದ ಎಲ್ಲಾ ಯೋಜನೆಗಳು ವಿಫಲವಾಗುತ್ತಿದ್ದವು . ಹೊಸ ನೋಟುಗಳನ್ನು ಎಟಿಎಂಗೆ ಸರಿಹೊಂದಿಸುವ ಪ್ರಕ್ರಿಯೆಗೆ ಸಾವಿರಾರು ಸಿಬ್ಬಂದಿಗಳ ಅಗತ್ಯವಿದೆ . ಎಟಿಎಂಗೆ ಸಂಬಂಧಿಸಿದ ತಂತ್ರಜ್ಞಾನದಲ್ಲಿ ಬದಲಾವಣೆಗೆ ಸಮಯದ ಅಗತ್ಯವಿದೆ. ಇದೊಂದು ಸುದೀರ್ಘ ಪ್ರಕ್ರಿಯೆಯಾಗಿದೆ ಎಂದರು.
ನಗದು ರಹಿತ ವ್ಯವಹಾರ ಹೆಚ್ಚಾಗಿ ನಡೆಸುವಂತೆ ಜನರಿಗೆ ಕರೆಕೊಟ್ಟ ಜೇಟ್ಲೀ, ಇದು ಬದುಕನ್ನು ಸರಳಗೊಳಿಸುತ್ತದೆ ಎಂದರು. ಬೃಹತ್ ಪ್ರಮಾಣದಲ್ಲಿ ನೋಟುಗಳು ಅಮಾನ್ಯಗೊಂಡಾಗ ಬ್ಯಾಂಕ್ ಎದುರು ಜನಸಂದಣಿ ಇರುವುದು ಸಹಜ.ಆರಂಭದ ದಿನದಲ್ಲೇ ಬ್ಯಾಂಕ್ ಎದುರು ಜಮಾಯಿಸುವ ಬದಲು ನಾಲ್ಕೈದು ದಿನ ಕಾದರೆ ಪರಿಸ್ಥಿತಿ ಸುಧಾರಿಸುತ್ತದೆ. ಡಿಸೆಂಬರ್ 30ರವರೆಗೂ ನೋಟು ಬದಲಾಯಿಸಲು ಅವಕಾಶವಿದೆ ಎಂದರು.
ನಿರ್ಧಾರ ಅನುಷ್ಠಾನಕ್ಕೆ ತರುವ ಮುನ್ನ ಕಾಲಾವಕಾಶ ನೀಡಬೇಕಿತ್ತು ಎಂಬ ವಿಪಕ್ಷಗಳ ಬೇಡಿಕೆಯನ್ನು ಒಪ್ಪದ ಅವರು, ಹೀಗಾದರೆ ಕಪ್ಪು ಹಣ ಇರುವವರಿಗೆ ತಪ್ಪಿಸಿಕೊಳ್ಳಲು ದಾರಿ ಹುಡುಕಿ ಕೊಟ್ಟಂತಾಗುತ್ತದೆ ಎಂದರು. ಜನಧನ ಖಾತೆಯಲ್ಲಿ ಜನರು ಠೇವಣಿ ಇರಿಸುತ್ತಿರುವುದು ಗಮನಕ್ಕೆ ಬಂದಿದೆ ಎಂದ ಅವರು, ಹಳೆಯ ಕರೆನ್ಸಿ ನೋಟುಗಳ ಮೂಲಕ ವ್ಯವಹಾರ ಮಾಡುವ ಚಿನ್ನಾಭರಣ ವರ್ತಕರು ಕಾನೂನಿಗೆ ವಿರುದ್ಧವಾಗಿ ನಡೆದುಕೊಳ್ಳಬಾರದು ಮತ್ತು ಸರಿಯಾದ ಲೆಕ್ಕಪತ್ರ ನೀಡಬೇಕು ಎಂದು ಎಚ್ಚರಿಸಿದರು.
ಭಾರತದ ಅತ್ಯಂತ ಬೃಹತ್ ಬ್ಯಾಂಕಿಂಗ್ ಸಂಸ್ಥೆ ಎನಿಸಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶನಿವಾರ (ನ.12)ರ ಅಪರಾಹ್ನ 12.15ರವರೆಗೆ 22.8 ಮಿಲಿಯನ್ ವಹಿವಾಟು ದಾಖಲಿಸಿದ್ದು 47,868 ಕೋಟಿ ರೂ. ಮೊತ್ತವನ್ನು ಬ್ಯಾಂಕ್‌ನಲ್ಲಿ ಠೇವಣಿಯಾಗಿರಿಸಲಾಗಿದೆ. ಇದು ಬದಲಾವಣೆಗೆ ಬ್ಯಾಂಕ್ ವ್ಯವಸ್ಥೆ ಹೇಗೆ ಹೊಂದಿಕೊಂಡಿದೆ ಎಂಬುದಕ್ಕೆ ಸೂಕ್ತ ಉದಾಹರಣೆ ಎಂದವರು ಹೇಳಿದರು.







