‘ಬ್ರೈನ್ ಕ್ವೆಸ್ಟ್’: ವಿದ್ಯಾರ್ಥಿಗಳ ಕೌಶಲ್ಯ ಪ್ರದರ್ಶನ

ಉಡುಪಿ, ನ.12: ಉಡುಪಿಯ ಇ ಸ್ಕೂಲ್ ವತಿಯಿಂದ ಉಡುಪಿ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಇಂದು ಆಯೋಜಿ ಸಲಾದ ‘ಬ್ರೈನ್ ಕ್ವೆಸ್ಟ್’ ವಿಜ್ಞಾನ ಮತ್ತು ತಂತ್ರಜ್ಞಾನ ಉತ್ಸವದಲ್ಲಿ ವಿದ್ಯಾರ್ಥಿ ಗಳು ವಿವಿಧ ಮಾದರಿಗಳನ್ನು ತಯಾರಿಸುವ ಮೂಲಕ ತಮ್ಮ ಕೌಶಲ್ಯಗಳನ್ನು ಪ್ರದರ್ಶಿಸಿದರು.
ಮಣಿಪಾಲ ಮಾಧವಕೃಪಾ ಶಾಲೆಯ ವಿದ್ಯಾರ್ಥಿಗಳು ಸರ್ವ ಸೌಲಭ್ಯ ಗಳ ಸ್ಮಾರ್ಟ್ ಸಿಟಿಯ ಮಾದರಿಯನ್ನು ತಯಾರಿಸಿ ಪ್ರದರ್ಶಿಸಿದರು. ಅದೇ ರೀತಿ ಹಲವು ಶಾಲೆಗಳ ವಿದ್ಯಾರ್ಥಿಗಳು ನಾಚಿಕೆ ಮುಳ್ಳಿನ ಎಲೆಯ ಕುರಿತು ನಡೆಸಿರುವ ಸಂಶೋಧನೆಯ ಬಗ್ಗೆ ಪ್ರೇಕ್ಷಕರಿಗೆ ವಿವರಣೆ ನೀಡಿದರು. ಟಿಶ್ಯೂ ಪೇಪರ್, ದಿನ ಪತ್ರಿಕೆ, ಅಡಿಕೆ ಹಾಗೂ ತೆಂಗಿನ ಗರಿಗಳಲ್ಲಿ ತಯಾರಿಸಿರುವ ಕ್ರಾಫ್ಟ್‌ಗಳು ಆಕರ್ಷಣೀಯವಾಗಿದ್ದವು.
ಕಸಿ ಮೂಲಕ ಒಂದೇ ಮಾವಿನ ಮರದಲ್ಲಿ ಮೂರು ಜಾತಿಯ ಮಾವಿನ ಹಣ್ಣನ್ನು ಬೆಳೆಸುವ ರೀತಿಯನ್ನು ಮಕ್ಕಳಿಗೆ ಹೇಳಿಕೊಡಲಾಯಿತು. ಮಾದರಿ ಸ್ಪರ್ಧೆಯಲ್ಲಿ ಉಡುಪಿಯ ಶಾರದಾ ರೆಸಿಡೆನ್ಶಿಯಲ್ ಶಾಲೆ ಸಹಿತ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಉಪ್ಪು ನೀರಿನಿಂದ ಸಿಹಿ ನೀರನ್ನು ಉತ್ಪಾದಿಸುವ ಮಾದರಿಯನ್ನು ಪ್ರದರ್ಶಿಸಿದರು.
ಕಿದಿಯೂರು ಎಸ್‌ವಿಎಸ್‌ಟಿ ಪ್ರೌಢಶಾಲೆಯ ವಿದ್ಯಾರ್ಥಿಗಳ ಸುಧಾರಿತ ಅಸ್ತ್ರ ಒಲೆ, ವಳಕಾಡು ಸರಕಾರಿ ಶಾಲೆಯ ಮಕ್ಕಳ ಒಂದೇ ಕಟ್ಟಡದಲ್ಲಿ ಹೈಡ್ರೋಲಿಕ್, ವಿಂಡ್ ಹಾಗೂ ಸೋಲಾರ್ ವಿದ್ಯುತ್ ಉತ್ಪಾದಿಸುವ ಮಾದರಿ, ಲಿಟ್ಲ್ ರಾಕ್ ವಿದ್ಯಾರ್ಥಿಗಳ ವಿಶಿಷ್ಟ ರೀತಿಯ ಕ್ವಿಝ್ ಬಝಾರ್, ಓಂತಿಬೆಟ್ಟು ಮೊರಾರ್ಜಿ ದೇಸಾಯಿ ಶಾಲೆಯ ಮಕ್ಕಳ ಅರಣ್ಯಕ್ಕೆ ಬೆಂಕಿ ಬಿದ್ದಾಗ ಸಂದೇಶ ನೀಡುವ ಮತ್ತು ನೀರು ಹಾಯಿಸಿ ಬೆಂಕಿ ನಂದಿಸುವ ಮಾದರಿ ಗಮನ ಸೆಳೆದವು.
ಈ ಬಾರಿಯ ಬ್ರೈನ್ ಕ್ವೆಸ್ಟ್‌ನಲ್ಲಿ ಜಿಲ್ಲೆಯ 20 ಶಾಲೆಗಳ 300ಕ್ಕೂ ಅಧಿಕ ವಿದ್ಯಾರ್ಥಿಗಳು ಪಾಲ್ಗೊಂಡಿದ್ದಾರೆ. ಉಪ್ಪು ನೀರಿನಿಂದ ಸಿಹಿ ನೀರು ಉತ್ಪಾದಿ ಸುವ ಮಾದರಿ, ಕಸಿ ಕಾರ್ಯಾಗಾರ, ನಾಚಿಕೆ ಮುಳ್ಳಿನ ಕುರಿತ ಸಂಶೋಧನೆ ಈ ಬಾರಿಯ ವಿಶೇಷವಾಗಿದೆ. ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲ ವಿದ್ಯಾರ್ಥಿ ಗಳಿಗೆ ತಲಾ 100ರೂ. ಮೌಲ್ಯದ ಗಿಫ್ಟ್ ಓಚರ್ ನೀಡಲಾಗುತ್ತದೆ ಎಂದು ಇಸ್ಕೂಲ್‌ನ ನಿರ್ದೇಶಕಿ ಡಾ.ಪೂರ್ಣಿಮಾ ಕಾಮತ್ ತಿಳಿಸಿದರು.







