ನೋಟು ಅಪಮೌಲ್ಯದಿಂದ ಜನ ಸಾಮಾನ್ಯರಿಗೆ ತೊಂದರೆ: ಚಿದಂಬರಂ

ಚೆನ್ನೈ, ನ.12: ದೊಡ್ಡ ಬೆಲೆಯ ನೋಟುಗಳ ರದ್ದತಿಯಿಂದ ಕಪ್ಪು ಹಣ ನಿಯಂತ್ರಣಕ್ಕೆ ಬರುವುದೆಂಬ ಸರಕಾರದ ವಾದಕ್ಕೆ ತಕರಾರೆತ್ತಿರುವ ಕೇಂದ್ರದ ಮಾಜಿ ವಿತ್ತ ಸಚಿವ ಪಿ.ಚಿದಂಬರಂ, ಅದರಿಂದ ಕೇವಲ ಜನ ಸಾಮಾನ್ಯರಿಗೆ ತೊಂದರೆಯಾಗುತ್ತದೆಂದು ಶನಿವಾರ ಹೇಳಿದ್ದಾರೆ.
ಜನರು ಔಷಧ, ಬಸ್ಸು-ರೈಲುಗಳ ಟಿಕೆಟ್ ಖರೀದಿ ಹಾಗೂ ಆಟೊ ರಿಕ್ಷಾಗಳಿಗೆ ಹಣ ನೀಡಲು ತ್ರಾಸ ಪಡುತ್ತಿದ್ದಾರೆ. ಹೆಚ್ಚಿನವರ ಕೈಯಲ್ಲಿರುವುದು ರೂ. 500 ಹಾಗೂ 1000ದ ನೋಟುಗಳೇ ಆಗಿವೆ. ಹೆಚ್ಚು ಚಲಾವಣೆಯಲ್ಲಿದ್ದ ನೋಟುಗಳ ರದ್ದತಿಯಿಂದ ಜನ ಸಾಮಾನ್ಯರಿಗೆ ತೊಂದರೆಯಾಗದೆಂಬ ಸರಕಾರದ ಹೇಳಿಕೆ ತಮಾಷೆಯದಾಗಿದೆಯೆಂದು ಅವರು ಟೀಕಿಸಿದ್ದಾರೆ.
ಇದು ಕಪ್ಪು ಹಣ ನಿವಾರಣೆಗೆ ಕ್ರಮವಲ್ಲ. ಕೇಂದ್ರದ ನಿರ್ಧಾರದಿಂದ ಜನ ಸಾಮಾನ್ಯರಿಗೆ ಬಾಧೆಯಾಗುತ್ತದೆ. ಇದು ತನ್ನ ಅಭಿಪ್ರಾಯವಾಗಿದೆಯೆಂದು ಚಿದಂಬರಂ ಪತ್ರಕರ್ತರಿಗೆ ತಿಳಿಸಿದರು.
ಕೇಂದ್ರೀಯ ನೇರ ತೆರಿಗೆಗಳ ಮಂಡಳಿಯು ರೂ. 2000ದ ನೋಟುಗಳನ್ನು ಚಲಾವಣೆಗೆ ತರುವುದು ಬೇಡ. ಅದರಿಂದ ಸಾರ್ವಜನಿಕರಿಗೆ ಅನುನೂಲಕ್ಕಿಂತ ಹೆಚ್ಚು ತೊಂದರೆಯೇ ಆಗಲಿದೆಯೆಂದು ಕೇಂದ್ರ ಸರಕಾರಕ್ಕೆ ಸಲಹೆ ನೀಡಿತ್ತು. ಅದನ್ನು ನಿರ್ಲಕ್ಷಿಸಿ ಸರಕಾರವೀಗ ಭಾರೀ ಚಲಾವಣೆಯಲ್ಲಿದ್ದ ರೂ. 500 ಹಾಗೂ 1000ದ ನೋಟುಗಳನ್ನು ನಿಷೇಧಿಸಿದೆಯೆಂದು ಅವರು ಆರೋಪಿಸಿದರು.
ಚಲಾವಣೆಯಲ್ಲಿರುವ ನೋಟುಗಳಲ್ಲಿ ಶೇ.86ರಷ್ಟು ರೂ. 500 ಹಾಗೂ 1000ದ ನೋಟುಗಳೇ ಅಗಿವೆ. ದೇಶಾದ್ಯಂತ ರೂ. 17ಲಕ್ಷ ಕೋಟಿ ವೌಲ್ಯದ ನೋಟುಗಳು ಚಲಾವಣೆಯಲ್ಲಿವೆ. ಅವುಗಳಲ್ಲಿ ರೂ. 400 ಕೋಟಿಯಷ್ಟು ನಕಲಿ ನೋಟುಗಳಿವೆಯೆಂದು ನಂಬಲಾಗಿದೆ. ಕೇವಲ ರೂ. 400 ಕೋಟಿಯ ನಕಲಿ ನೋಟು ನಾಶ ಮಾಡಲು ರೂ. 17 ಲಕ್ಷ ಕೋಟಿಯ ಚಲಾವಣೆಯನ್ನು ತಡೆಯುವ ಅಗತ್ಯವೇನಿತ್ತು ಎಂದು ಚಿದಂಬರಂ ಪ್ರಶ್ನಿಸಿದರು.
ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಕೇವಲ ‘ಛಾಯಾಚಿತ್ರದ ಅವಕಾಶಕ್ಕೆ’ ಮಾತ್ರ ನೋಟು ಬದಲಾವಣೆಗಾಗಿ ಸರತಿಯ ಸಾಲಿನಲ್ಲಿ ನಿಂತಿದ್ದರೆಂಬ ಬಿಜೆಪಿಯ ಟೀಕೆಯ ಕುರಿತು ಮಾತನಾಡಿದ ಅವರು, ಅದರ ಹೊರತು ಅವರೇನು ಮಾಡಬೇಕಿತ್ತು? ಅವೌಲ್ಯವಾದ ನೋಟುಗಳೊಂದಿಗೆ ಒಬ್ಬನು ಬದುಕಲು ಸಾಧ್ಯವಿದೆಯೇ? ಅದಕ್ಕಾಗಿ ರಾಹುಲ್ ರೂ. 4000 ಬದಲಾಯಿಸಿಕೊಳ್ಳಲು ಹೋಗಿದ್ದರು. ಸಂಬಂಧಿತ ಸಚಿವರ ಮನೆಯಲ್ಲಿ ಹೊಸ ನೋಟುಗಳ ಬದಲಾವಣೆ ಆಗುತ್ತದೆಯೇ ಎಂಬುದು ತನಗೆ ತಿಳಿದಿಲ್ಲ. ಉಳಿದವರು ಅದಕ್ಕಾಗಿ ಬ್ಯಾಂಕ್‌ಗಳಿಗೇ ಹೋಗಬೇಕಾಗುತ್ತದೆಂದು ಟೀಕಿಸಿದರು.





