ಕಾಶ್ಮೀರಿ ಬಾಲೆ ತಜಮುಲ್ ಇಸ್ಲಾಮ್‌ಗೆ ವಿಶ್ವ ಕಿಕ್ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ

ಶ್ರೀನಗರ, ನ.12: ಕಾಶ್ಮೀರ ಕಣಿವೆಯ ಹಿಂದುಳಿದ ಪ್ರದೇಶದ 8ರ ಹರೆಯದ ಬಾಲಕಿ ಇಟಲಿಯಲ್ಲಿ ನಡೆದ ವಿಶ್ವ ಕಿಕ್‌ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕವನ್ನು ಗೆದ್ದುಕೊಂಡಿದ್ದಾರೆ.
ಬಂದಿಪೊರ ಜಿಲ್ಲೆಯ ಹಳ್ಳಿಯೊಂದರ ಬಾಲಕಿ ತಜಮುಲ್ ಇಸ್ಲಾಮ್ ಸಬ್-ಜೂನಿಯರ್ ಮಟ್ಟದ ಸ್ಪರ್ಧೆಯಲ್ಲಿ ಎದುರಾಳಿ ಅಮೆರಿಕದ ಬಾಲಕಿಯನ್ನು ಮಣಿಸಿ ಚಿನ್ನದ ಪದಕವನ್ನು ಜಯಿಸಿದರು.
ತಜಮುಲ್ ಕಿಕ್ ಬಾಕ್ಸಿಂಗ್‌ನಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ಪದಕ ಜಯಿಸಿದ ವಿಶ್ವದ ಮೊದಲ ಕಿರಿಯ ಬಾಕ್ಸರ್ ಆಗಿದ್ದಾರೆ. ಸಬ್-ಜೂನಿಯರ್ ಮಟ್ಟದಲ್ಲಿ 14 ವರ್ಷದವರೆಗಿನ ಸ್ಪರ್ಧಿಗಳು ಭಾಗವಹಿಸಬಹುದು. ಈ ವಿಭಾಗದಲ್ಲಿ ತಜಮುಲ್ ಕಿರಿಯ ಸ್ಪರ್ಧಿಯಾಗಿದ್ದರು ಎಂದು ತಜಮುಲ್ ಕೋಚ್ ಫಸಿಲ್ ಅಲಿ ಹೇಳಿದ್ದಾರೆ. ತಜಮುಲ್ ಸಾಧನೆಯು ಶುಕ್ರವಾರ ವೈರಲ್‌ನಂತೆ ಹರಿದಾಡುತ್ತಿದ್ದಂತೆಯೇ ಮಾಜಿ ಮುಖ್ಯಮಂತ್ರಿ ಉಮರ್ ಅಬ್ದುಲ್ಲಾ ಬಾಲಕಿಗೆ ಟ್ವಿಟರ್‌ನ ಮೂಲಕ ಅಭಿನಂದನೆ ಸಲ್ಲಿಸಿದರು.
ತರ್ಕಪೊರ ಹಳ್ಳಿಯ ಅಲಿ ಕಳೆದ ಎರಡು ವರ್ಷಗಳಿಂದ ತಜಮುಲ್‌ಗೆ ಕೋಚಿಂಗ್ ನೀಡುತ್ತಿದ್ದಾರೆ. ಬಾಲಕಿ ನನ್ನ ಬಳಿ ಕೋಚಿಂಗ್‌ಗೆ ಬರುವಾಗ ಯುಕೆಜಿಯಲ್ಲಿ ಪಾಸಾಗಿದ್ದಳು. ಹಿಂಸಾತ್ಮಕ ಪರಿಸ್ಥಿತಿಯಿಂದ ಕೂಡಿರುವ ಕಾಶ್ಮೀರದಲ್ಲಿ ಮೂಲಭೂತ ಸೌಕರ್ಯದ ಕೊರತೆಯಿದ್ದರೂ ತಜಮುಲ್ ಚಿನ್ನದ ಪದಕವನ್ನು ಜಯಿಸಿ ಇಡೀ ದೇಶದ ಗಮನ ಸೆಳೆದಿದ್ದಾರೆ.
ಕಳೆದೆ ವರ್ಷ ದಿಲ್ಲಿಯಲ್ಲಿ ನಡೆದ ರಾಷ್ಟ್ರೀಯ ಕಿಕ್‌ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಸಬ್-ಜೂನಿಯರ್ ವಿಭಾಗದಲ್ಲಿ ಚಿನ್ನದ ಪದಕವನ್ನು ಜಯಿಸುವುದರೊಂದಿಗೆ ತಜಮುಲ್ ಪ್ರತಿಭೆ ಮೊದಲ ಬಾರಿ ಬೆಳಕಿಗೆ ಬಂದಿತ್ತು. ಇಲ್ಲಿ ನೀಡಿರುವ ಪ್ರದರ್ಶನದ ಆಧಾರದಲ್ಲಿ ಈ ತಿಂಗಳಾಂತ್ಯದಲ್ಲಿ ಇಟಲಿಯ ಆ್ಯಂಡ್ರಿಯದಲ್ಲಿ ನಡೆದ ವಿಶ್ವ ಚಾಂಪಿಯನ್‌ಶಿಪ್‌ಗೆ ಅರ್ಹತೆ ಪಡೆದಿದ್ದರು.
ಐದು ದಿನಗಳ ಕಾಲ ನಡೆದಿದ್ದ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ನ.10 ರಂದು ಕೊನೆಗೊಂಡಿತ್ತು. ತಜಮುಲ್ ಆರು ಪಂದ್ಯಗಳಲ್ಲಿ ಜಯ ಸಾಧಿಸಿದ್ದರು. ಮಕ್ಕಳ ದಿನಾಚರಣೆಯಂದು(ನ.14) ತಜಮುಲ್ ಸ್ವದೇಶಕ್ಕೆ ವಾಪಸಾಗಲಿದ್ದಾರೆ ಎಂದು ಕೋಚ್ ಅಲಿ ಹೆಮ್ಮೆಯಿಂದ ಹೇಳಿಕೊಂಡರು.
ಶ್ರೀನಗರದಿಂದ 65 ಕಿ.ಮೀ. ದೂರದಲ್ಲಿರುವ ತರ್ಕ್‌ಪೊರ ಹಳ್ಳಿಯಲ್ಲಿ ತಜಮುಲ್ ಮನೆ ಮಾತಾಗಿದ್ದಾರೆ. ತಜಮುಲ್ ಬಂದಿಪೊರದ ಆರ್ಮಿ ಗುಡ್‌ವಿಲ್ ಸ್ಕೂಲ್‌ನಲ್ಲಿ ಓದುತ್ತಿದ್ದು ಬಾಲಕಿಯ ತಂದೆ ಚಾಲಕ ವೃತ್ತಿಯಲ್ಲಿದ್ದಾರೆ.







