ಬಜ್ಪೆ ಸಹಕಾರಿ ಸಂಘಕ್ಕೆ ಐಟಿ ದಾಳಿ
ಕೋಟ್ಯಂತರ ರೂ. ವ್ಯವಹಾರದ ಆರೋಪ

ಮಂಗಳೂರು, ನ.12: ಹಣ ಠೇವಣಿ ವ್ಯವಹಾರಕ್ಕೆ ಸಂಬಂಧಿಸಿದಂತೆ ಬಜ್ಪೆಯ ವ್ಯವಸಾಯ ಸೇವಾ ಸಹಕಾರಿ ಸಂಘಕ್ಕೆ ಆದಾಯ ತೆರಿಗೆ ಇಲಾಖೆಯವರು ದಾಳಿ ನಡೆಸಿದ್ದಾರೆ.
ಸಂಘಕ್ಕೆ ಐಟಿ ದಾಳಿ ನಡೆಸಿರುವುದನ್ನು ದೃಢೀಕರಿಸಿರುವ ಬಜ್ಪೆ ಠಾಣಾ ಪೊಲೀಸರು ಈ ಸಂಬಂಧ ಮಾಹಿತಿಯನ್ನು ನೀಡಲು ನಿರಾಕರಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು 500 ಮತ್ತು 1000 ಮುಖಬೆಲೆಯ ನೋಟುಗಳನ್ನು ನಿಷೇಧಿಸಿದ ಬಳಿಕ ಸರಕಾರ ವಿಧಿಸಿದ ನಿರ್ದಿಷ್ಟ ಠೇವಣಿಯ ಮೊತ್ತಕ್ಕಿಂತೂ ಅಧಿಕ ಪ್ರಮಾಣದಲ್ಲಿ ಠೇವಣಿಯಾಗಿ ಸ್ವೀಕರಿಸಿ ಕೋಟ್ಯಂತರ ರೂ. ವ್ಯವಹಾರ ನಡೆಸಿದೆ ಎಂದು ಆರೋಪಿಸಲಾಗಿದೆ.
ಮೂಲಗಳ ಪ್ರಕಾರ ಈ ಸಹಕಾರಿ ಸಂಘವು ಸ್ವೀಕರಿಸಿದ ಲಕ್ಷಾಂತರ ರೂ. ಮೊತ್ತವನ್ನು, ಸರಕಾರ ನೋಟು ನಿಷೇಧ ಜಾರಿಗೊಳಿಸಿದ್ದ ಹಿಂದಿನ ದಿನಗಳಿಗೆ ನಮೂದಿಸಿದೆ ಎಂದು ಆರೋಪಿಸಲಾಗಿದೆ. ಇದರಿಂದಾಗಿ ಈ ಸಹಕಾರಿ ಸಂಘಕ್ಕೆ ಹೆಚ್ಚಿನ ಗ್ರಾಹಕರು ಭೇಟಿ ನೀಡಿ ತಮ್ಮ ಹಣವನ್ನು ಠೇವಣಿ ಇರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
35 ಕೋಟಿ ರೂ. ಮೊತ್ತದ ಹಣವು ಬಜ್ಪೆ ಆಸುಪಾಸಿನಲ್ಲಿ ಹರಿದಾಡುತ್ತಿದೆ ಎಂಬ ವದಂತಿ ಶುಕ್ರವಾರ ಬಜ್ಪೆ ಪ್ರದೇಶದಲ್ಲಿ ಹರಿದಾಡಿದ್ದು, ಆ ಮೊತ್ತವು ಎಲ್ಲಿ ಠೇವಣಿಯಾಗಿದೆ ಎಂಬುದರ ಬಗ್ಗೆ ಮಾಹಿತಿ ಇಲ್ಲ. ಈ ಬಗ್ಗೆ ಮಾಹಿತಿ ಪಡೆದಿದ್ದ ಐಟಿ ಅಧಿಕಾರಿಗಳು ಸಹಕಾರಿ ಸಂಘಕ್ಕೆ ದಾಳಿ ನಡೆಸಿದ್ದಾರೆಂದು ಮೂಲಗಳು ತಿಳಿಸಿವೆ.







