ದೇಶ ಉಳಿಸಲು ಸಿಪಿಎಂ ಜೊತೆ ಕಾರ್ಯ ನಿರ್ವಹಿಸಲು ಸಿದ್ಧ: ಮಮತಾ

ಕೋಲ್ಕತಾ, ನ.12: ಅಧಿಕ ವೌಲ್ಯದ ನೋಟುಗಳನ್ನು ಅಮಾನ್ಯಗೊಳಿಸಿದ ಕೇಂದ್ರ ಸರಕಾರದ ಕ್ರಮವನ್ನು ಕಟುವಾಗಿ ಟೀಕಿಸಿರುವ ಪಶ್ಚಿಮ ಬಂಗಾಲದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ದೇಶವನ್ನು ಉಳಿಸಲು ತನ್ನ ಬದ್ಧವೈರಿ ಸಿಪಿಎಂ ಸೇರಿದಂತೆ ಪ್ರತಿಪಕ್ಷಗಳ ಜೊತೆಗೂಡಿ ಕಾರ್ಯ ನಿರ್ವಹಿಸಲು ಸಿದ್ಧ ಎಂದು ಹೇಳಿದ್ದಾರೆ.
ನಮ್ಮ ಮತ್ತು ಸಿಪಿಎಂ ಮಧ್ಯೆ ಸೈದ್ಧಾಂತಿಕ ಭಿನ್ನತೆ ಇರಬಹುದು. ಆದರೆ ದೇಶದ ರಕ್ಷಣೆಯ ಪ್ರಶ್ನೆ ಬಂದಾಗ ನಾವು ಸಿಪಿಎಂ , ಕಾಂಗ್ರೆಸ್, ಸಮಾಜವಾದಿ ಪಾರ್ಟಿ, ಬಿಎಸ್‌ಪಿ ಜೊತೆ ಸೇರಿ ಕಾರ್ಯನಿರ್ವಹಿಸಲು ಸಿದ್ಧರಾಗಿದ್ದೇವೆ ಎಂದವರು ಹೇಳಿದರು.
ಅಮಾನ್ಯಗೊಂಡ ನೋಟುಗಳನ್ನು ಬದಲಿಸಲು ಕೋಲ್ಕತ್ತಾದ ಎಟಿಎಂ ಕೇಂದ್ರಗಳು ಹಾಗೂ ಬ್ಯಾಂಕ್‌ಗಳಲ್ಲಿ ಶ್ರೀಸಾಮಾನ್ಯರು ಪಡುತ್ತಿರುವ ಬವಣೆಯನ್ನು ವೀಕ್ಷಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.
ಜನಸಾಮಾನ್ಯರ ವಿರೋಧಿಯಾಗಿರುವ ಈ ‘ಕಪ್ಪು’ ರಾಜಕೀಯ ನಿರ್ಧಾರವನ್ನು ಹಿಂಪಡೆಯಿರಿ. ಭಾರತದಾದ್ಯಂತ ಮಾರುಕಟ್ಟೆಗಳು ಸ್ಮಶಾನ ಸದೃಶವಾಗಿವೆ. ಜನರು ನೊಂದಿದ್ದಾರೆ ಎಂದ ಅವರು, ಕೇವಲ ಜನಸಾಮಾನ್ಯರು ಮಾತ್ರ ತೊಂದರೆಗೊಳಗಾಗಿದ್ದಾರೆ. ಅಪರಾಧಿಗಳನ್ನು ಪತ್ತೆ ಹಚ್ಚಿ ಮಟ್ಟಹಾಕಲಿ. ಕಪ್ಪು ಹಣ ಇರುವವರು ಸರತಿ ಸಾಲಿನಲ್ಲಿ ನಿಂತುಕೊಳ್ಳುವುದಿಲ್ಲ. ಆವರು ತಮ್ಮದೇ ಆದ ಮಾರ್ಗ ಕಂಡುಕೊಂಡಿದ್ದಾರೆ ಎಂದು ಹೇಳಿದರು.
ಕೇಂದ್ರ ಸರಕಾರ ಈ ನಿರ್ಧಾರವನ್ನು ತಕ್ಷಣ ವಾಪಸು ಪಡೆಯಬೇಕು. ಬ್ಯಾಂಕ್‌ನಲ್ಲಿ ಮತ್ತು ಎಟಿಎಂ ಕೇಂದ್ರಗಳಲ್ಲಿ ಹಣವೇ ಸಿಗದಿದ್ದರೆ ಜನಸಾಮಾನ್ಯರು ಏನು ಮಾಡಬೇಕು? ಎಂದು ಪ್ರಶ್ನಿಸಿದ ಮಮತಾ, ದಿನವಿಡೀ ಸರತಿ ಸಾಲಿನಲ್ಲಿ ನಿಂತ ಬಳಿಕ ಬ್ಯಾಂಕ್‌ನವರು ಐನೂರು, ಸಾವಿರ ಮುಖಬೆಲೆಯ ನೋಟನ್ನು ಬದಲಿಸಿ, 2000 ರೂ. ಮುಖಬೆಲೆಯ ನೋಟನ್ನು ನೀಡುತ್ತಿದ್ದಾರೆ. ಇನ್ನೊಂದೆಡೆ, 500 ರೂ. ಹೊಸ ನೋಟು ಬಂದಿಲ್ಲ. 100 ರೂ. ನೋಟಿನ ಕೊರತೆಯಿದೆ. ಈ 2000 ರೂ. ಮುಖಬೆಲೆಯ ನೋಟು ಹಿಡಿದುಕೊಂಡು ಜನರು ಏನು ಮಾಡುವುದು. ಎಲ್ಲೆಡೆ ಆಕ್ರೋಶದ ಪರಿಸ್ಥಿತಿಯಿದೆ ಎಂದು ಮಮತಾ ಬ್ಯಾನರ್ಜಿ ಹೇಳಿದರು.





