ಭಾರತದ ಶ್ರೀಜೇಶ್ ನಾಮನಿರ್ದೇಶನ
ಎಫ್‌ಐಎಚ್ ವರ್ಷದ ಗೋಲ್‌ಕೀಪರ್ ಪ್ರಶಸ್ತಿ

ದುಬೈ, ನ.12: ಅಂತಾರಾಷ್ಟ್ರೀಯ ಹಾಕಿ ಫೆಡರೇಶನ್(ಎಫ್‌ಐಎಚ್) ವರ್ಷದ ಗೋಲ್‌ಕೀಪರ್ ಪ್ರಶಸ್ತಿಗೆ ಭಾರತದ ಪುರುಷರ ಹಾಕಿ ತಂಡದ ನಾಯಕ ಪಿ.ಆರ್. ಶ್ರೀಜೇಶ್ ನಾಮನಿರ್ದೇಶನಗೊಂಡಿದ್ದಾರೆ. 2016ನೆ ಸಾಲಿನ ಉದಯೋನ್ಮುಖ ಪುರುಷ ಆಟಗಾರ ಪ್ರಶಸ್ತಿಗೆ ಭಾರತದ ಇನ್ನೋರ್ವ ಆಟಗಾರ ಹರ್ಮನ್‌ಪ್ರೀತ್ ಸಿಂಗ್ ನಾಮನಿರ್ದೇಶನಗೊಂಡಿದ್ದಾರೆ.
ಈಗ ದುಬೈನಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಹಾಕಿ ಫೆಡರೇಶನ್‌ನ ಹಾಕಿ ರೆವಲೂಶನ್ ಪಾರ್ಟ್-2 ಕಾನ್ಫರೆನ್ಸ್‌ನಲ್ಲಿ ಶ್ರೇಷ್ಠ ಆಟಗಾರರು, ಗೋಲ್‌ಕೀಪರ್‌ಗಳು, ಉದಯೋನ್ಮುಖ ತಾರೆಗಳು, ಕೋಚ್‌ಗಳು ಹಾಗೂ ಅಂಪೈರ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡವರ ಹೆಸರು ಪ್ರಕಟಿಸಲಾಗಿದೆ.
2016ರ ವರ್ಷದ ಆಟಗಾರರ ಪಟ್ಟಿಯಲ್ಲಿ ಪುರುಷ ಹಾಗೂ ಮಹಿಳಾ ವಿಭಾಗದಲ್ಲಿ ಭಾರತದ ಯಾರೂ ಸ್ಥಾನ ಪಡೆದಿಲ್ಲ.
ಪ್ರತಿ ಪ್ರಶಸ್ತಿಗೆ ಐವರು ಪುರುಷರು ಹಾಗೂ ಐವರು ಮಹಿಳೆಯರನ್ನು ನಾಮನಿರ್ದೇಶನಗೊಳಿಸಲಾಗುತ್ತದೆ. ಶ್ರೇಷ್ಠ ಆಟಗಾರ, ಗೋಲ್‌ಕೀಪರ್ ಹಾಗೂ ಉದಯೋನ್ಮುಖ ಸ್ಟಾರ್ ಪ್ರಶಸ್ತಿಗಳನ್ನು ಎಫ್‌ಐಎಚ್ ಅಥ್ಲೆಟಿಕ್ಸ್ ಸಮಿತಿ, ಕಾಂಟಿನೆಂಟೆಲ್ ಫೆಡರೇಶನ್ಸ್, ಕೋಚ್‌ಗಳು ಹಾಗೂ ಮಾಧ್ಯಮ ಆಯ್ಕೆ ಮಾಡಲಿದೆ. 2016ರ ಋತುವಿನಲ್ಲಿ ಅಂತಾರಾಷ್ಟ್ರೀಯ ಟೂರ್ನಿಗಳಲ್ಲಿ ನೀಡಿರುವ ಪ್ರದರ್ಶನ ಆಧಾರದಲ್ಲಿ ಪ್ರಶಸ್ತಿ ವಿಜೇತರನ್ನು ಆಯ್ಕೆ ಮಾಡಲಾಗುತ್ತದೆ.
ಪ್ರಶಸ್ತಿ ವಿಜೇತರನ್ನು ಸಾರ್ವಜನಿಕರಿಗಾಗಿ ತೆರೆದಿರುವ ಆನ್‌ಲೈನ್ ವೋಟ್ ಹಾಗೂ ಅಂತಾರಾಷ್ಟ್ರೀಯ ಅಥ್ಲೀಟ್‌ಗಳ ಮತಗಳು ನಿರ್ಧರಿಸುತ್ತವೆ. ಆಟಗಾರರಿಗೆ, ಗೋಲ್‌ಕೀಪರ್‌ಗಳಿಗೆ ಹಾಗೂ ರೈಸಿಂಗ್ ಸ್ಟಾರ್‌ಗಳ ಆಯ್ಕೆಗೆ ನ.16 ರಿಂದ ಮತದಾನ ಮಾಡಬಹುದು. ಮತದಾನ ಡಿ.2 ರಂದು ಕೊನೆಗೊಳ್ಳುತ್ತದೆ.
2016ರ ಅಂಪೈರ್ ಅವಾರ್ಡ್ ವಿನ್ನರ್‌ನ್ನು ಎಫ್‌ಐಎಚ್ ಅಂಪೈರ್ ಸಮಿತಿ ಆಯ್ಕೆ ಮಾಡಲಿದೆ. ಎಲ್ಲ ಪ್ರಶಸ್ತಿ ವಿಜೇತರ ಪಟ್ಟಿಯನ್ನು ಮುಂದಿನ ವರ್ಷದ ಜನವರಿಯಲ್ಲಿ ಘೋಷಿಸಲಾಗುತ್ತದೆ.







