ಕೊಲೆ ಯತ್ನ ಪ್ರಕರಣ: ಓರ್ವನ ಬಂಧನ.
ಮಂಗಳೂರು, ನ. 12: ಅತ್ತಾವರ ಕೆಎಂಸಿ ಆಸ್ಪತ್ರೆಯ ಮುಂಭಾಗದ ಬಸ್ಸು ತಂಗುದಾಣದ ಬಳಿ ಬಂಟ್ವಾಳದ ನಂದಾವರ ಬಳಿಯ ನಿವಾಸಿ ಅಟೋ ರಿಕ್ಷಾ ಚಾಲಕ ಗುರುದತ್ ನಾಯಕ್ (35) ಎಂಬವರ ಕೊಲೆ ಯತ್ನ ಪ್ರಕರಣದ ಆರೋಪಿ ಮಂಗಳೂರು ಕಸಬಾ ಬೆಂಗ್ರೆಯ ಅಬ್ದುಲ್ ಸಲೀಂ ಎಂಬಾತನನ್ನು ಮಂಗಳೂರು ದಕ್ಷಿಣ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಕಳೆದ ವರ್ಷದ ಆಗಸ್ಟ್ 26ರಂದು ರಾತ್ರಿ ಗುರುದತ್ ನಾಯಕ್ ತನ್ನ ಅಟೋ ರಿಕ್ಷಾದಲ್ಲಿ ಕುಳಿತುಕೊಂಡಿದ್ದ ಸಮಯ ಆರೋಪಿಗಳು ತಲವಾರುಗಳಿಂದ ಕಡಿದು, ಚೂರಿಯಿಂದ ಇರಿದು ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದರು. ಬಳಿಕ ಆರೋಪಿಗಳು ಎರಡು ಬೈಕ್‌ಗಳಲ್ಲಿ ಪರಾರಿಯಾಗಿದ್ದರು. ಈ ಬಗ್ಗೆ ಮಂಗಳೂರು ದಕ್ಷಿಣ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ ದಾಖಲಾಗಿತ್ತು.
ಘಟನೆಯ ನಂತರ ಆರೋಪಿಗಳು ತಲೆಮರೆಸಿಕೊಂಡಿದ್ದರು. ಶುಕ್ರವಾರಬೆಳಗ್ಗೆ 5:45ಕ್ಕೆ ಮಂಗಳೂರು ದಕ್ಷಿಣ ಠಾಣೆಯ ಪೊಲೀಸರು ಆರೋಪಿ ಅಬ್ದುಲ್ ಸಲೀಂನನ್ನು ಪುತ್ತೂರಿನ ಬೈಪಾಸ್ ಬಳಿ ದಸ್ತಗಿರಿ ಮಾಡಿ, ಕೃತ್ಯಕ್ಕೆ ಉಪಯೋಗಿಸಿದ ಮೋಟಾರ್ ಸೈಕಲನ್ನು ಸ್ವಾಧೀನಪಡಿಸಿಕೊಂಡಿದ್ದಾರೆ. ಆರೋಪಿಗಳು ಸುಮಾರು ಒಂದು ವರ್ಷದಿಂದ ತಲೆಮರಸಿಕೊಂಡಿದ್ದು, ಪ್ರಕರಣದಲ್ಲಿ ಭಾಗಿಯಾದ ನಾಲ್ಕು ಜನ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಬ್ದುಲ್ ಸಲೀಂನ ಮೇಲೆ ಮಂಗಳೂರು ದಕ್ಷಿಣ ಠಾಣೆಯಲ್ಲಿ ಎರಡು ಕೊಲೆ ಯತ್ನ ಪ್ರಕರಣಗಳು ದಾಖಲಾಗಿವೆ. ರಹೀಮ್ ಉಚ್ಚಿಲ್ರವರ ಕೊಲೆ ಯತ್ನ ಹಾಗೂ ಯೋಗೀಶ್‌ಎಂಬವರ ಕೊಲೆ ಯತ್ನ ಪ್ರಕರಣ ದಾಖಲಾಗಿವೆ.
ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಬೆಳ್ಳಿಯಪ್ಪ ಕೆ. ಯು. ಇವರ ಮಾರ್ಗದರ್ಶನದಲ್ಲಿ ಮಂಗಳೂರು ದಕ್ಷಿಣ ಠಾಣೆಯ ಪೊಲೀಸ್ ಉಪ ನಿರೀಕ್ಷಕ ಅನಂತ ಮುರ್ಡೇಶ್ವರ ಆರೋಪಿಗಳನ್ನು ಬಂಧಿಸಿದ್ದಾರೆ.







