ಹೊಸ ನೋಟುಗಳು ಖೋಟಾ ಸೃಷ್ಟಿ ಸಾಧ್ಯವಿಲ್ಲದಷ್ಟು ಸುರಕ್ಷಿತವೇ?
ಹೊಸದಿಲ್ಲಿ, ನ.12: ಹಳೆಯ 500 ಹಾಗೂ 1000 ರೂ. ನೋಟುಗಳ ಬದಲಿಗೆ ನೀಡಲಾಗುತ್ತಿರುವ ಹೊಸ 500 ಹಾಗೂ 2000 ರೂ. ನೋಟುಗಳು ನಕಲು ಗೊಳಿಸಲು ಸಾಧ್ಯವಿಲ್ಲದಷ್ಟು ಸುರಕ್ಷಿತವೇ? ಇಂತಹ ಒಂದು ಪ್ರಶ್ನೆ ಹಲವರನ್ನು ಕಾಡಬಹುದು.
ಹಿರಿಯ ಸರಕಾರಿ ಅಧಿಕಾರಿಯೊಬ್ಬರ ಪ್ರಕಾರ ‘‘ಈ ಕಾರ್ಯ ಅಸಾಧ್ಯವೇನಲ್ಲ. ನೋಟಿನ ವಿನ್ಯಾಸ ಮಾತ್ರ ಬದಲಾಗಿದ್ದು ಅದರ ಸೆಕ್ಯುರಿಟಿ ಫೀಚರ್ಸ್ ಹಿಂದಿನ ನೋಟುಗಳಂತೆಯೇ ಇವೆ. ಪಾಕಿಸ್ತಾನ ತನ್ನ ಸರಕಾರಿ ಮುದ್ರಣಾಲಯದಲ್ಲಿ ನಕಲಿ ನೋಟುಗಳನ್ನು ಪ್ರಿಂಟ್ ಮಾಡುತ್ತಿದೆ’’ ಎಂದು ಅವರು ಹೇಳುತ್ತಾರೆ.
ಹೊಸ ನೋಟುಗಳನ್ನು ಪ್ರಿಂಟ್ ಮಾಡುವ ನಿರ್ಧಾರವನ್ನು ಆರು ತಿಂಗಳುಗಳ ಹಿಂದೆ ತೆಗೆದುಕೊಳ್ಳಲಾಗಿದ್ದು ಮೈಸೂರಿನ ಬ್ಯಾಂಕ್ ನೋಟ್ ಪೇಪರ್ ಮಿಲ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ಗೆ ಈ ನೋಟುಗಳನ್ನು ಮುದ್ರಿಸುವ ಜವಾಬ್ದಾರಿ ನೀಡಲಾಗಿತ್ತು. ಈ ಮುದ್ರಣಾಲಯ ವರ್ಷಕ್ಕೆ 12,000 ಎಂಟಿ ಸಾಮರ್ಥ್ಯ ಹೊಂದಿದ್ದು, 2000 ರೂ. ನೋಟುಗಳೂ ಸೇರಿದಂತೆ 18 ಬಿಲಿಯನ್ ನೋಟುಗಳನ್ನು ಮುದ್ರಿಸುವ ಅಗತ್ಯವಿದೆ. ಇಂತಹ ಒಂದು ಕಾರ್ಯವನ್ನು ಈ ಹಿಂದೆ 2005ರಲ್ಲಿ ಕೈಗೊಳ್ಳಲಾಗಿತ್ತು.
ಭಾರತವು ನೋಟುಗಳ ಕಾಗದಗಳನ್ನು ಯುರೋಪಿಯನ್ ಸಂಸ್ಥೆಗಳಾದ ಜರ್ಮನಿಯ ಲೂಯಸೆಂಥಲ್, ಇಂಗ್ಲೆಂಡಿನ ಡಿಲರೂ, ಸ್ವೀಡನ್ನಿನ ಕ್ರೇನ್ ಹಾಗೂ ಫ್ರಾನ್ಸ್ ಮತ್ತು ನೆದರ್ಲ್ಯಾಂಡಿನಲ್ಲಿರುವ ಅರ್ಜೊ ವಿಗ್ಗಿನ್ಸ್ ಇಲ್ಲಿಂದ ಆಮದುಗೊಳಿಸುತ್ತಿದೆ.
‘‘ಪ್ರಸ್ತುತ ಶೇ.70 ರಷ್ಟು ನೋಟುಗಳನ್ನು ಭಾರತದಲ್ಲಿಯೇ ತಯಾರಿಸಲಾಗುತ್ತಿದ್ದು ಮುಂದಿನೆರಡು ವರ್ಷಗಳಲ್ಲಿ ಈ ನಿಟ್ಟಿನಲ್ಲಿ ಶೇ.100 ರಷ್ಟು ಸ್ವಾವಲಂಬನೆ ಸಾಧಿಸುವ ಗುರಿಯಿದೆ’’ ಎಂದು ಆ ಅಧಿಕಾರಿ ತಿಳಿಸಿದ್ದಾರೆ. ನೋಟುಗಳನ್ನು ಭಾರತದಲ್ಲಿಯೇ ತಯಾರಿಸುವ ನಿಟ್ಟಿನಲ್ಲಿ ಪ್ರಧಾನಿ ಕಾರ್ಯಾಲಯವು ಹೆಚ್ಚಿನ ಒತ್ತಡ ಹೇರಿತ್ತು ಎಂದು ತಿಳಿದು ಬಂದಿದೆ. ಭಾರತ ನೋಟು ಕಾಗದಗಳನ್ನು ಆಮದುಗೊಳಿಸುವ ದೇಶಗಳು ನ್ಯಾಟೋ ಸದಸ್ಯರಾಗಿದ್ದು ಇವುಗಳು ಮುಂದೆ ಏನಾದರೂ ಆಮದಿಗೆ ನಿಷೇಧ ಹೇರಿದಲ್ಲಿ ಭಾರತಕ್ಕೆ ತೊಂದರೆಯಾಗಬಹುದೆಂಬ ಮುಂದಾಲೋಚನೆಯೇ ಇದಕ್ಕೆ ಕಾರಣವೆನ್ನಲಾಗಿದೆ.
ಹೊಸ ಫೀಚರ್‌ಗಳನ್ನು ಸೇರಿಸಲು ಸಮಯವಿಲ್ಲ: ಹೊಸ 2000 ರೂ. ನೋಟುಗಳು ಮೆಜಂತಾ ಬಣ್ಣದ್ದಾಗಿದ್ದು ಅವುಗಳಲ್ಲಿ ಹೊಸ ಸೆಕ್ಯುರಿಟಿ ಫೀಚರ್‌ಗಳನ್ನು ಸೇರಿಸಲು ಸಮಯವಿಲ್ಲದೇ ಇದ್ದ ಕಾರಣ ಹಳೆಯ ಫೀಚರ್‌ಗಳನ್ನೇ ಉಳಿಸಿಕೊಂಡು ಹೊಸ ವಿನ್ಯಾಸದಲ್ಲಿ ನೋಟುಗಳನ್ನು ಮುದ್ರಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.





