ಮೋದಿಯ ವೈಫಲ್ಯ ಮುಚ್ಚಲು ನೋಟು ರದ್ದತಿ: ಕೇರಳ ಸಿಪಿಐ
ತಿರುವನಂತಪುರ, ನ.12: ಕಪ್ಪು ಹಣವನ್ನು ನಿಯಂತ್ರಿಸುವಲ್ಲಿ ಪ್ರಧಾನಿ ನರೇಂದ್ರ ಮೋದಿ ಸರಕಾರದ ‘ವೈಫಲ್ಯವನ್ನು’ ಮುಚ್ಚಿ ಹಾಕುವುದಕ್ಕಾಗಿ ರೂ. 500 ಹಾಗೂ ರೂ. 1000ದ ನೋಟುಗಳನ್ನು ರದ್ದುಪಡಿಸಲಾಗಿದೆಯೆಂದು ಸಿಪಿಐಯ ಕೇರಳ ಘಟಕ ಆರೋಪಿಸಿದೆ.
ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರದ ಈ ಕ್ರಮ ಕಪ್ಪು ಹಣವನ್ನು ಮಟ್ಟ ಹಾಕಲಾರದು. ಕಪ್ಪು ಹಣವು ಬಂಗಾರ ಹಾಗೂ ಸ್ಟಾಕ್ ಎಕ್ಸ್‌ಚೇಂಜ್ ಠೇವಣಿಗಳ ರೂಪದಲ್ಲಿ ಅಸ್ತಿತ್ವವನ್ನು ಮುಂದುವರಿಸಲಿದೆಯೆಂದು ಸಿಪಿಐ ರಾಜ್ಯ ಕಾರ್ಯದರ್ಶಿ ಕಾನಂ ರಾಜೇಂದ್ರನ್ ಪ್ರತಿಪಾದಿಸಿದ್ದಾರೆ.
ಕೇರಳ ಕಾರ್ಯನಿರತ ಪತ್ರಕರ್ತರ ಒಕ್ಕೂಟ ಸಂಘಟಿಸಿದ್ದ ‘ಮಾಧ್ಯಮ ಭೇಟಿ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೇರಳದ ಸಹಕಾರಿ ಬ್ಯಾಂಕ್‌ಗಳಲ್ಲಿ ಕೋಟ್ಯಂತರ ರೂಪಾಯಿ ಕಪ್ಪು ಹಣವನ್ನು ರಾಶಿ ಹಾಕಲಾಗಿದೆಯೆಂಬ ಬಿಜೆಪಿ ನಾಯಕರ ಆರೋಪವನ್ನು ತಳ್ಳಿ ಹಾಕಿದರು.
ನೋಟು ರದ್ದತಿಯಿಂದ ಕಪ್ಪು ಹಣ ಅಂತ್ಯವಾಗುವುದೇ? ಹಾಗಾದರೆ ಚಿನ್ನ ಹಾಗೂ ಸ್ಟಾಕ್ ಎಕ್ಸ್‌ಚೇಂಜ್ ಠೇವಣಿಗಳ ರೂಪದಲ್ಲಿ ಅನಧಿಕೃತ ಹಣದ ನಿಯಂತ್ರಣಕ್ಕೆ ಮಾರ್ಗವೇನು? ಎಂದು ರಾಜೇಂದ್ರನ್ ಪ್ರಶ್ನಿಸಿದರು.
ವಿದೇಶಗಳಲ್ಲಿ ಠೇವಣಿಯಿರಿಸಿರುವ ಕಪ್ಪು ಹಣ ಮರಳಿ ತರುತ್ತೇವೆಂದು ಮೋದಿ 2 ವರ್ಷಗಳಿಂದ ಹೇಳುತ್ತಿದ್ದಾರೆ. ಆದರೆ, ಅದನ್ನು ಮಾಡಲು ಅವರು ವಿಫಲರಾಗಿದ್ದಾರೆ. ಈ ವೈಫಲ್ಯವನ್ನು ಮುಚ್ಚಲು ಇದೀಗ ನೋಟು ರದ್ದತಿ ಮಾಡಲಾಗಿದೆಯೆಂದು ಅವರು ಆರೋಪಿಸಿದರು.
ರಾಜ್ಯದಲ್ಲಿರುವ ಸಹಕಾರಿ ಬ್ಯಾಂಕ್‌ಗಳಲ್ಲಿರುವ ಠೇವಣಿಗಳ ಬಗ್ಗೆ ತನಿಖೆ ನಡೆಸಬೇಕೆಂಬ ಬಿಜೆಪಿಯ ಆಗ್ರಹವು, ಸಹಕಾರಿ ವಲಯವನ್ನು ನಾಶಗೊಳಿಸುವ ಲೆಕ್ಕಾಚಾರದ ನಡೆಯ ಒಂದು ಭಾಗವಾಗಿದೆ. ಸಹಕಾರಿ ಬ್ಯಾಂಕ್‌ಗಳು ರಿಸರ್ವ್ ಬ್ಯಾಂಕ್‌ನ ಪರವಾನಿಗೆಯನ್ವಯ ಕಾರ್ಯಾಚರಿಸುತ್ತಿವೆ. ಅವು ರಾಜ್ಯದ ಕೃಷಿ ವಲಯದ ಬೆನ್ನೆಲುಬಾಗಿವೆ ಹಾಗೂ ಆರ್ಥಿಕತೆಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿವೆ. ಕೇರಳದಂತೆಯೇ ಗುಜರಾತ್‌ನಲ್ಲೂ ಸಹಕಾರಿ ಬ್ಯಾಂಕ್‌ಗಳು ಮಹತ್ವದ ಪಾತ್ರ ವಹಿಸುತ್ತಿವೆಯೆಂದು ರಾಜೇಂದ್ರನ್ ಹೇಳಿದರು.





