ಟ್ರಂಪ್ ಆಯ್ಕೆ ವಿರುದ್ಧ ಮುಂದುವರಿದ ಪ್ರತಿಭಟನೆ
ಅಶ್ರುವಾಯು ಶೆಲ್, ಗ್ರೆನೇಡ್ ಬಳಸಿದ ಪೊಲೀಸರು
ಪೋರ್ಟ್‌ಲ್ಯಾಂಡ್ (ಒರೆಗಾನ್), ನ. 12: ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ವಿಜಯಿಯಾಗಿರುವುದನ್ನು ಅರಗಿಸಿಕೊಳ್ಳಲು ಸಾಧ್ಯವಾಗದ ಜನರು ಶುಕ್ರವಾರ ಮತ್ತೊಂದು ಸುತ್ತು ದೇಶಾದ್ಯಂತ ಬೀದಿಗಿಳಿದು ಪ್ರತಿಭಟನೆ ನಡೆಸಿದರು.
ಒರೆಗಾನ್ ರಾಜ್ಯದ ಪೋರ್ಟ್‌ಲ್ಯಾಂಡ್‌ನಲ್ಲಿ ನಡೆದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದಾಗ, ಪೊಲೀಸರು ಅಶ್ರುವಾಯು ಶೆಲ್‌ಗಳನ್ನು ಸಿಡಿಸಿದರು ಹಾಗೂ ‘ಫ್ಲಾಶ್-ಬ್ಯಾಂಗ್’ ಗ್ರೆನೇಡ್‌ಗಳನ್ನು ಎಸೆದರು.
ಪೊಲೀಸರತ್ತ ಪ್ರತಿಭಟನಕಾರರು ಉರಿಯುತ್ತಿರುವ ಕೊಳ್ಳಿಗಳನ್ನು ಎಸೆದಾಗ ಪೊಲೀಸರು ಅಶ್ರುವಾಯು ಶೆಲ್‌ಗಳನ್ನು ಸಿಡಿಸಿದರು ಎಂದು ಪೋರ್ಟ್‌ಲ್ಯಾಂಡ್ ಪೊಲೀಸರು ಶುಕ್ರವಾರ ರಾತ್ರಿ ‘ಟ್ವಿಟರ್’ನಲ್ಲಿ ತಿಳಿಸಿದರು.
ನೂರಾರು ಪ್ರತಿಭಟನಾಕಾರರು ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು. ಈ ಸಂದರ್ಭದಲ್ಲಿ ರಸ್ತೆ ಸಂಚಾರ ಅಸ್ತವ್ಯಸ್ತವಾಯಿತು ಹಾಗೂ ಪ್ರತಿಭಟನಾಕಾರರು ಗೋಡೆಗಳ ಮೇಲೆ ಸ್ಪ್ರೇಪೇಂಟಿಂಗ್ ಮೂಲಕ ಘೋಷಣೆಗಳನ್ನು ಬರೆದರು ಎಂದು ಪೊಲೀಸರು ತಿಳಿಸಿದರು.
ದೇಶದ ಇತರ ಭಾಗಗಳಲ್ಲೂ, ಬುಧವಾರದಿಂದ ನಡೆಯುತ್ತಿರುವ ಕಾಲೇಜ್ ಕ್ಯಾಂಪಸ್ ಪ್ರತಿಭಟನೆ ಹಾಗೂ ನಗರದ ರಸ್ತೆಗಳಲ್ಲಿ ನಡೆಯುತ್ತಿರುವ ಶಾಂತಿಯುತ ಮೆರವಣಿಗೆಗಳು ಮುಂದುವರಿದಿವೆ.
ಮ್ಯಾನ್‌ಹಟನ್‌ನಲ್ಲಿರುವ ‘ವಾಶಿಂಗ್ಟನ್ ಸ್ಕ್ವೇರ್ ಪಾರ್ಕ್’ನಲ್ಲಿ ಶುಕ್ರವಾರ ಅಪರಾಹ್ನ ನಡೆದ ‘ಲವ್ ರ್ಯಾಲಿ’ಯಲ್ಲಿ ನೂರಾರು ಮಂದಿ ಪಾಲ್ಗೊಂಡರು.







