ಕಮಲಾ ಹ್ಯಾರಿಸ್ ಅಮೆರಿಕದ ಪ್ರಥಮ ಅಧ್ಯಕ್ಷೆಯಾಗಲು ಸಮರ್ಥೆ: ಮಾಧ್ಯಮ ವರದಿ

ವಾಶಿಂಗ್ಟನ್, ನ. 12: ಭಾರತ ಮೂಲದ ಕ್ಯಾಲಿಪೋರ್ನಿಯ ಅಟಾರ್ನಿ ಜನರಲ್ ಕಮಲಾ ಹ್ಯಾರಿಸ್ ಅಮೆರಿಕದ ಪ್ರಥಮ ಅಧ್ಯಕ್ಷೆಯಾಗುವ ಸಾಮರ್ಥ್ಯ ಹೊಂದಿದ್ದಾರೆ ಎಂದು ಮಾಧ್ಯಮ ವರದಿಯೊಂದು ಹೇಳಿದೆ.
ದೇಶದ ಪ್ರಥಮ ಮಹಿಳಾ ಅಧ್ಯಕ್ಷರಾಗುವ ಅವಕಾಶ ಹಿಲರಿ ಕ್ಲಿಂಟನ್‌ರ ಕೈತಪ್ಪಿದ ಬಳಿಕ, ಕಮಲಾ ಹ್ಯಾರಿಸ್ ಮೇಲೆ ಗಮನ ಕೇಂದ್ರೀಕೃತವಾಗಿದೆ.
51 ವರ್ಷದ ಹ್ಯಾರಿಸ್‌ರ ತಾಯಿ ಚೆನ್ನೈಯವರು ಹಾಗೂ ತಂದೆ ಜಮೈಕದವರು. ಅವರು ಮಂಗಳವಾರ ನಡೆದ ಚುನಾವಣೆಯಲ್ಲಿ ಕ್ಯಾಲಿಫೋರ್ನಿಯದಿಂದ ಅಮೆರಿಕದ ಸೆನೆಟ್‌ಗೆ ಆಯ್ಕೆಯಾಗಿದ್ದಾರೆ. ಆ ಮೂಲಕ ರಾಜ್ಯದಿಂದ ಆಯ್ಕೆಯಾದ ಮೊದಲ ಬಿಳಿಯೇತರ ಸೆನೆಟರ್ ಆಗಿದ್ದಾರೆ.
ತನ್ನ ವಿಜಯದ ಬಳಿಕ ಅವರು, ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ವಲಸೆ ನೀತಿಗಳು ಮತ್ತು ಸಂಭಾವ್ಯ ಸಾಮೂಹಿಕ ಗಡಿಪಾರಿನ ವಿರುದ್ಧ ರಾಷ್ಟ್ರವ್ಯಾಪಿ ಅಭಿಯಾನ ಆರಂಭಿಸಿದ್ದಾರೆ.
‘‘ಇವರು ಕಮಲಾ ಹ್ಯಾರಿಸ್. ಇವರಿಗೆ ಪ್ರಥಮ ಮಹಿಳಾ ಅಧ್ಯಕ್ಷರಾಗುವ ಸಾಮರ್ಥ್ಯವಿದೆ. ಕ್ಯಾಲಿಫೋರ್ನಿಯದ ಜನಪ್ರಿಯ ಅಟಾರ್ನಿ ಜನರಲ್ ಕಾಂಗ್ರೆಸ್‌ನತ್ತ ಹೊರಟಿದ್ದಾರೆ. ಬಹುಶ ಶ್ವೇತಭವನ ಅವರ ಮುಂದಿನ ಗುರಿಯಾಗಿದೆ’’ ಎಂದು ‘ಹಫಿಂಗ್ಟನ್ ಪೋಸ್ಟ್’ ಶುಕ್ರವಾರ ಬರೆದಿದೆ.





