ಜನಸಾಮಾನ್ಯರ ಅಭಿವೃದ್ಧಿಯಲ್ಲಿ ಕಾಂಗ್ರೆಸ್ ಪಕ್ಷದ ಪಾತ್ರ ಹಿರಿದು: ಸಚಿವ ರೈ
‘ಕಾಂಗ್ರೆಸ್ ನಡಿಗೆ-ಗ್ರಾಮ ಸುರಾಜ್ಯದ ಕಡೆಗೆ’

ಸುಬ್ರಹ್ಮಣ್ಯ, ನ.12: ರಾಷ್ಟ್ರದಲ್ಲಿ ನಿರಂತರ ಅಭಿವೃದ್ಧಿಯ ಚಿಂತನೆಯನ್ನು ಒಳಗೊಂಡ ಏಕೈಕ ಪಕ್ಷ ಕಾಂಗ್ರೆಸ್ ಆಗಿದೆ. ಬಿಜೆಪಿಯು ದೇಶದಲ್ಲಿ ತನ್ನ ಅಧಿಕಾರ ಉಳಿಸಿಕೊಳ್ಳುವುದಕ್ಕಾಗಿ ಮತೀಯ ಗಲಭೆಗಳನ್ನು ಎಬ್ಬಿಸುತ್ತಿದೆ. ಆದರೆ ಪ್ರತಿ ರಾಜ್ಯಗಳನ್ನು ಒಂದು ಗೂಡಿಸಿಕೊಂಡು ಪ್ರಗತಿಯ ಕಡೆಗೆ ನಿರಂತರವಾಗಿ ನಮ್ಮ ಪಕ್ಷ ಶ್ರಮಿಸುತ್ತಿದೆ. ಜನಸಾಮಾನ್ಯರ ಅಭಿವೃದ್ಧಿಗೆ ಕಾಂಗ್ರೆಸ್ ಪಕ್ಷದ ಪಾತ್ರ ಹಿರಿದು ಎಂದು ಅರಣ್ಯ ಹಾಗೂ ಉಸ್ತುವಾರಿ ಸಚಿವ ಬಿ ರಮಾನಾಥ ರೈ ಹೇಳಿದರು.
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಸುಳ್ಯ ವಿಧಾನಸಭಾ ಕ್ಷೇತ್ರ ಹಾಗೂ ಕಡಬ ಬ್ಲಾಕ್ ಆಶ್ರಯದಲ್ಲಿ ಶನಿವಾರ ಪಡ್ಪಿನಂಗಡಿ ನಡ್ಕ ಶಿವಗೌರಿ ಕಲಾಮಂದಿರದಲ್ಲಿ ಜರಗಿದ ಕಾಂಗ್ರೆಸ್ ನಡಿಗೆ-ಗ್ರಾಮ ಸುರಾಜ್ಯದ ಕಡೆಗೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಇಂದಿರಾ ಗಾಂಧಿಯವರು ಪ್ರಧಾನಿಯಾಗಿದ್ದ ಸಂದರ್ಭ ತೀವ್ರ ವಿರೋಧಗಳ ನಡುವೆಯೂ ಬಡವರ ಮೇಲಿನ ಕಾಳಜಿಯಿಂದ ಭೂ ಮಸೂದೆ ತಿದ್ದುಪಡಿ ಕಾಯ್ದೆ ಜಾರಿಗೆ ತಂದು ಸಮಾಜದಲ್ಲಿ ಬಡವರಿಗೆ ಜಮೀನು ದೊರಕುವಂತೆ ಮಾಡಿದ್ದಾರೆ. ಇಂದು ರಾಜ್ಯ ಸರಕಾರ ಅನೇಕ ಜನಪರ ಯೋಜನೆಗಳನ್ನು ನೀಡುವ ಮೂಲಕ ಬಡವರ ಪಾಲಿಗೆ ಆಶಾಕಿರಣವಾಗಿದೆ ಎಂದರು.
ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಯು ಟಿ ಖಾದರ್ ಆಗಮಿಸಿ ಶುಭ ಹಾರೈಸಿದರು. ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ, ಕೆಪಿಸಿಸಿ ಸದಸ್ಯ ಡಾ.ಎಲ್.ಹನುಮಂತಯ್ಯ, ಮಾಜಿ ಸಚಿವೆ ರಾಣಿ ಸತೀಶ್, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾಲೆಟ್ ಪಿಂಟೋ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ, ಸಮಾಜ ಕಲ್ಯಾಣ ಇಲಾಖೆ ಅಧ್ಯಕ್ಷೆ ದಿವ್ಯಪ್ರಭಾ ಚಿಲ್ತಡ್ಕ, ಸಿಂಡಿಕೆಟ್ ಸದಸ್ಯ ಡಾ.ರಘು, ಜಿಪಂ ಸದಸ್ಯ ಪಿ.ಪಿ.ವರ್ಗೀಸ್, ಮಾಜಿ ಸದಸ್ಯರಾದ ಧನಂಜಯ ಅಡ್ಪಂಗಾಯ, ಸರ್ವೋತ್ತಮ ಗೌಡ, ಸರಸ್ವತಿ ಕಾಮತ್, ಶಿವಣ್ಣ ಗೌಡ, ರಾಜ್ಯ ಅಲ್ಪಸಂಖ್ಯಾತರ ಘಟಕದ ಕಾರ್ಯದರ್ಶಿ ಶಂಸುದ್ಧೀನ್, ತಾಪಂ ಸದಸ್ಯ ಅಬ್ದುಲ್ ಗಫೂರ್, ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ವೆಂಕಪ್ಪ ಗೌಡ, ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿಜಯಕುಮಾರ್ ರೈ, ಕಾರ್ಯಕ್ರಮದ ಉಸ್ತುವಾರಿ ವಹಿಸಿದ್ದ ಹೇಮನಾಥ ಶೆಟ್ಟಿ ಕಾವು, ಕಿಸಾನ್ ಕಾಂಗ್ರೆಸ್ ರಾಜ್ಯಾಧ್ಯಕ್ಷ ಸಚಿನ್, ವಿಜಯಕಮಾರ್ ಸೊರಕೆ, ಪಿ.ಸಿ.ಜಯರಾಮ್ ಗೌಡ ಮತ್ತಿತರರು ಉಪಸ್ಥಿತರಿದ್ದರು.
ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ವೆಂಕಪ್ಪ ಗೌಡ ಸ್ವಾಗತಿಸಿದರು. ಅಶೋಕ್ ಚೂಂತಾರು ಕಾರ್ಯಕ್ರಮ ನಿರೂಪಿಸಿದರು.







