ಕಾಮಗಾರಿಗಾಗಿ ಶಿರಾಡಿ ಘಾಟ್ ರಸ್ತೆ ಬಂದ್ ಇಲ್ಲ: ಸಚಿವ ರೈ
ಸುಬ್ರಹ್ಮಣ್ಯ, ನ.12: ಶಿರಾಡಿ ಘಾಟ್ ರಸ್ತೆಯ ಎರಡನೆ ಹಂತದ ಕಾಮಗಾರಿಯೂ ಶೀಘ್ರ ಆರಂಭವಾಗಲಿದೆ. ಆದರೆ ಕಾಮಗಾರಿ ಸಂದರ್ಭ ರಸ್ತೆ ಬಂದ್ ಮಾಡುವ ಪ್ರಶ್ನೆಯೇ ಇಲ್ಲ. ಹೆದ್ದಾರಿ ಬಂದ್‌ಗೆ ನನ್ನ ತೀವ್ರ ವಿರೋಧವಿದೆ. ಕಾಮಗಾರಿ ಸಂದರ್ಭ ಲಘು ವಾಹನ ತೆರಳಲು ಅನುವು ಮಾಡಿಕೊಡಬೇಕು ಎಂದು ಈಗಾಗಲೇ ಸಂಬಂಧ ಪಟ್ಟ ಅಧಿಕಾರಿಗಳಿಗೆ ಆದೇಶಿಸಿದ್ದೇನೆ. ಈ ಹಿಂದೆ ರಸ್ತೆ ಮುಚ್ಚುಗಡೆಯಿಂದ ಸಾರ್ವಜನಿಕರಿಗೆ ಸಾಕಷ್ಟು ತೊಂದರೆಯಾಗಿತ್ತು. ಆದ್ದರಿಂದ ಈ ಬಾರಿ ಘಾಟಿ ಬಂದ್ ಮಾಡದೆ ಕಾಮಗಾರಿ ನಡೆಸಲಾಗುವುದು ಎಂದು ಅರಣ್ಯ ಮತ್ತು ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದರು.
ಪಡ್ಪಿನಂಗಡಿಯಲ್ಲಿ ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಜನತೆಗೆ ತೊಂದರೆ ಆಗುವ ರೀತಿಯಲ್ಲಿ ಕಾಮಗಾರಿ ನಡೆಸಲಾಗುವುದಿಲ್ಲ. ಜನತೆಯ ಹಿತ ದೃಷ್ಟಿಯಿಂದ ಎರಡನೆ ಹಂತದ ಕಾಮಗಾರಿಯನ್ನು ರಸ್ತೆ ಮುಚ್ಚದೆ ನಡೆಸಲಾಗುವುದು ಎಂದರು.
* ಅರಣ್ಯ ಇಲಾಖೆ ಸ್ಪಂದನೆ
ಎತ್ತಿನ ಹೊಳೆ ಯೋಜನೆಯ ಸಂದರ್ಭ ಮರಗಳನ್ನು ತೆಗೆಯುವ ಪರಿಸ್ಥಿತಿ ಬಂದಾಗ ಅರಣ್ಯ ಇಲಾಖೆ ಸೂಕ್ತವಾಗಿ ಸ್ಪಂದಿಸಲಿದೆ. ಈ ಹಿಂದೆ ಶಿರಾಡಿ ಘಾಟಿ ಕಾಮಗಾರಿ ವೇಳೆ ಮತ್ತು ಅಂಕೋಲಾದಲ್ಲಿ ರೈಲು ಮಾರ್ಗ ನಿರ್ಮಾಣದ ಸಂದರ್ಭ ಅರಣ್ಯ ಇಲಾಖೆಯು ಮರಗಳನ್ನು ತೆಗೆಯಲು ಅನುಮತಿ ನೀಡಿದೆ ಎಂದು ಸಚಿವರು ಹೇಳಿದರು.







