ಚಿಲ್ಲರೆಯಾದ ಜನಸಾಮಾನ್ಯರ ಬದುಕು..!
ಕಾಸರಗೋಡು, ನ.12: 500 ಮತ್ತು 1,000 ರೂ. ಅಮಾನ್ಯಗೊಳಿಸಿದ ಹಿನ್ನಲೆ ಯಲ್ಲಿ ಜನಸಾಮಾನ್ಯರ ಬದುಕೇ ಚಿಲ್ಲರೆಯಾದಂತಾಗಿದೆ.
ಸುಮಾರು ಮೂರು ದಿನಗಳಿಂದ ಬ್ಯಾಂಕ್, ಅಂಚೆ ಕಚೇರಿಗಳ ಮುಂದೆ ಹಣ ವಿನಿಮಯಕ್ಕಾಗಿ ಜನಜಾತ್ರೆ ಕಂಡು ಬರುತ್ತಿದೆ.
ವ್ಯಾಪಾರ ವಹಿವಾಟು ಮೇಲೆ ನೇರ ಪರಿಣಾಮ ಬೀರಿದ್ದು, ಬೆಳಗ್ಗೆಯಿಂದ ರಾತ್ರಿವರೆಗೆ ಬ್ಯಾಂಕ್ ಮುಂಭಾಗದಲ್ಲಿ ಗ್ರಾಹಕರು ಪಡುವ ಸಂಕಷ್ಟಕ್ಕೆ ಕೊನೆ ಇಲ್ಲದಂತಾಗಿದೆ.
ಬ್ಯಾಂಕ್‌ಗಳಲ್ಲಿ 2,000 ರೂ. ನೋಟುಗಳು ಮಾತ್ರ ಲಭಿಸುತ್ತಿದ್ದು, ಈ ನೋಟುಗಳ ಚಿಲ್ಲರೆಗಾಗಿ ಜನಸಾಮಾನ್ಯರು ಪರದಾಡುವಂತಾಗಿದೆ. ಇನ್ನೊಂದೆಡೆ ಎಟಿಎಂಗಳಲ್ಲಿ ಅಗತ್ಯ ಹಣ ಲಭಿಸದಿರುವುದು ಹಾಗೂ ಅರ್ಧದಷ್ಟು ಎಟಿಎಂಗಳು ಬಾಗಿಲು ತೆರೆಯದಿರುವುದು ಸಮಸ್ಯೆಗೆ ಕಾರಣವಾಗಿದೆ.
ನ.15ರಿಂದ ವರ್ತಕರ ಅನಿರ್ಧಿಷ್ಟಾವಧಿ ಮುಷ್ಕರ
ಚಿಲ್ಲರೆ ಸಮಸ್ಯೆ ತೀವ್ರಗೊಂಡ ಹಿನ್ನಲೆಯಲ್ಲಿ ನ.15ರಿಂದ ಕೇರಳದಲ್ಲಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಲು ವರ್ತಕರ ಸಂಘದ ರಾಜ್ಯ ಸಮಿತಿ ತೀರ್ಮಾನಿಸಿದೆ.
ಈಗಾಗಲೇ ವ್ಯಾಪಾರ ವಲಯಕ್ಕೆ ಕೋಟ್ಯಂತರ ರೂ. ನಷ್ಟ ಉಂಟಾಗಿದ್ದು, ಚಿಲ್ಲರೆ ಸಮಸ್ಯೆಯಿಂದ ಪರಿಹಾರವಾಗುವ ವರೆಗೆ ಅಂಗಡಿ ಮುಂಗಟ್ಟುಗಳನ್ನು ತೆರೆಯದಿರಲು ಸಮಿತಿ ತೀರ್ಮಾನಿಸಿದೆ.





