ರಜಾದಿನದಲ್ಲಿ ಬ್ಯಾಂಕ್ ತೆರೆದರೂ ಗ್ರಾಹಕರ ಪರದಾಟ
500, 1000 ರೂ. ನೋಟುಗಳ ನಿಷೇಧ
ಮಂಗಳೂರು, ನ.12: ಹಣ ವಿನಿಮಯಕ್ಕಾಗಿ ರಜಾದಿನವಾದ ಶನಿವಾರ ಬ್ಯಾಂಕ್‌ಗಳು ತೆರೆಯಲ್ಪಟ್ಟರೂ ಕೂಡ ಗ್ರಾಹಕರ ಪರದಾಟ ಮಾತ್ರ ಇನ್ನೂ ತಪ್ಪಲಿಲ್ಲ. ಗ್ರಾಹಕರು ಸುಮಾರು ಎರಡು ದಿನ ಅನುಭವಿಸಿದ ಬವಣೆಯನ್ನು ಶನಿವಾರ ಕೂಡ ಎದುರಿಸಿದರು.
ಗ್ರಾಹಕರಿಗೆ ಅನುಕೂಲ ಮಾಡುವ ನಿಟ್ಟಿನಲ್ಲಿ ಶನಿವಾರ ಮತ್ತು ರವಿವಾರ ಬ್ಯಾಂಕ್ ಕಚೇರಿಗಳು ತೆರೆಯಲಿದೆ ಎಂದು ಹಿಂದೆಯೇ ಘೊಷಿಸಿದ ಹಿನ್ನೆಲೆ ಇಂದು ಬೆಳಗ್ಗೆ ಎಂದಿನಂತೆ ಗ್ರಾಹಕರು ಸರದಿ ಸಾಲಿನಲ್ಲಿ ನಿಂತರು. ಎಟಿಎಂಗೂ ನೂಕುನುಗ್ಗಲು ನಡೆಸಿದರು. ಆದರೆ ಶುಕ್ರವಾರದಂತೆ ಎಟಿಎಂನಲ್ಲಿ ಕೆಲವೇ ಮಂದಿಗೆ ಮಾತ್ರ ನಗದು ಲಭಿಸಿತು. ಇನ್ನು ಬ್ಯಾಂಕ್‌ಗಳಲ್ಲೂ ಹೆಚ್ಚಿನವರಿಗೆ ಹಣ ಸಿಗಲಿಲ್ಲ. ಹಾಗಾಗಿ ಅನೇಕ ಮಂದಿ ತೊಂದರೆಗೊಳಗಾದರು.
ಈ ಮಧ್ಯೆ ‘ಚಿಲ್ಲರೆ’ ಸಮಸ್ಯೆ ಮುಂದುವರಿದಿದ್ದು, ಜನರು ಅಂಗಡಿ ಮುಂಗಟ್ಟುಗಳಿಂದ ದಿನ ಬಳಕೆ ಸಾಮಗ್ರಿಗಳನ್ನು ಪಡೆಯಲು ಹರಸಾಹಸ ಪಡುವಂತಾಗಿದೆ. *ನೋಟು ಸ್ವೀಕರಿಸಲಾಗುವುದು: ನಗರ ಮತ್ತು ಹೊರವಲಯದ ಬಹುತೇಕ ಅಂಗಡಿ ಮುಂಗಟ್ಟುಗಳಲ್ಲಿ 500, 1,000 ರೂ. ನೋಟುಗಳನ್ನು ಸ್ವೀಕರಿಸಲಾಗುವುದಿಲ್ಲ ಎಂದು ಬೋರ್ಡ್ ತಗಲಿಸಿರುವುದು ಸಾಮಾನ್ಯ. ಆದರೆ ಪಂಪ್‌ವೆಲ್ ಸರ್ಕಲ್ ಸಮೀಪದ ಪಟಾಕಿ ಅಂಗಡಿಗಳಲ್ಲಿ 500, 1,000 ರೂ. ನೋಟುಗಳನ್ನು ಸ್ವೀಕರಿಸಲಾಗುವುದು ಎಂದು ಬೋರ್ಡ್ ಹಾಕಿರುವುದು ವಿಶೇಷವಾಗಿತ್ತು. ಪಟಾಕಿ ಪ್ರಿಯರಿಗೆ ಇದು ಸುಗ್ಗಿಯಾಗಿರುವುದು ಸುಳ್ಳಲ್ಲ.







