ಎರಡನೆ ದಿನವೂ ಮುಲ್ಕಿ ಬ್ಯಾಂಕ್‌ಗಳಲ್ಲಿ ಹೌಸ್‌ಫುಲ್!
500, 1000 ರೂ. ನೋಟುಗಳ ನಿಷೇಧ

ಮುಲ್ಕಿ, ನ.12: ಕೇಂದ್ರ ಸರಕಾರದಿಂದ 500 ಹಾಗೂ 1,000 ರೂ. ನೋಟುಗಳ ನಿಷೇಧದಿಂದ ಮುಲ್ಕಿ ಹೋಬಳಿಯ ಜನಸಾಮಾನ್ಯರಲ್ಲಿ ಎರಡನೆ ದಿನವೂ ತಲ್ಲಣ ಉಂಟಾಗಿದೆ. ಶನಿವಾರ ಬೆಳಗ್ಗಿನಿಂದಲೇ ಬ್ಯಾಂಕ್‌ಗಳಲ್ಲಿ ಸಾಲುಗಟ್ಟಲೆ ಗ್ರಾಹಕರು ನಿಂತಿರುವುದು ಕಾಣುತ್ತಿತ್ತು. ಮುಲ್ಕಿ ಹೋಬಳಿಯ ಹಳೆಯಂಗಡಿ, ಕಿನ್ನಿಗೋಳಿ, ಮೂರು ಕಾವೇರಿ, ಪಕ್ಷಿಕೆರೆ ಬ್ಯಾಂಕ್‌ಗಳಲ್ಲಿ ಶನಿವಾರವೂ ಹಣಕ್ಕಾಗಿ ನೂಕುನುಗ್ಗಲು ಉಂಟಾಗಿದೆ.
ಕಾರ್ನಾಡಿನ ಸಿಂಡಿಕೇಟ್ ಹಾಗೂ ಎಸ್‌ಬಿಐ ಬ್ಯಾಂಕ್‌ನಲ್ಲಿ ವಿಪರೀತ ಗ್ರಾಹಕರ ನೂಕುನುಗ್ಗಲು ಉಂಟಾಗಿದೆ. ಮುಲ್ಕಿ ಹೋಬಳಿಯ ಎಲ್ಲ ಎಟಿಎಂ ಸ್ಥಗಿತಗೊಂಡಿದ್ದು, ಗ್ರಾಹಕರ ಆಕ್ರೋಶಕ್ಕೆ ಕಾರಣವಾಗಿತ್ತು. ಆದರೆ ಮುಲ್ಕಿ ವಿಜಯ ಬ್ಯಾಂಕ್‌ನಲ್ಲಿ ಬೆಳಗ್ಗೆ ಎಟಿಎಂ ಚಾಲೂ ಇದ್ದು, ಸ್ವಲ್ಪ ಹೊತ್ತಿನ ಬಳಿಕ ಸ್ಥಗಿತಗೊಂಡಿದೆ.
ಕಿನ್ನಿಗೋಳಿ ಸಮೀಪದ ಮೂರು ಕಾವೇರಿ ಎಟಿಎಂ ಸ್ಥಗಿತಗೊಂಡಿದ್ದಕ್ಕೆ ಗ್ರಾಹಕರು ಆಕ್ರೋಶತರಾಗಿ ಬ್ಯಾಂಕ್ ಸಿಬ್ಬಂದಿ ಮೇಲೆ ಆಕ್ರೋಶ ವ್ಯಕ್ತಪಡಿಸುತ್ತಿದ್ದರು. ಗ್ರಾಹಕರು ಹಣ ಡೆಪೊಸಿಟ್ ಮಾಡಲು ಕ್ಯೂ ನಿಲ್ಲಬೇಕಾದ ಪರಿಸ್ಥಿತಿ ಬಗ್ಗೆ ಹಿಡಿಶಾಪ ಹಾಕುತ್ತಿದ್ದರು.





