ಈಗ ದೇಶಾದ್ಯಂತ ಶಾಲೆಗಳಲ್ಲಿ 'ಆರೆಸ್ಸೆಸ್ ವಿಜ್ಞಾನ' ಪರೀಕ್ಷೆ

ಈ ವಿಶೇಷ ವಿಜ್ಞಾನದ ಸ್ಯಾಂಪಲ್ ಗಳನ್ನು ನೋಡಿ
"ಖಗೋಳ ವಿಜ್ಞಾನ ಹಾಗೂ ತತ್ವಶಾಸ್ತ್ರವನ್ನು ಋಗ್ವೇದದಲ್ಲಿ ವಿವರಿಸಲಾಗಿದೆ"
"ಅಣು ಪರಿಕಲ್ಪನೆ ವೇದಕಾಲದಲ್ಲೇ ಇತ್ತು"
"ಪರಮಾಣು ಅತ್ಯಂತ ಸಣ್ಣ ಕಣ. ಇದನ್ನು ಮತ್ತೆ ವಿಭಜಿಸಲಾಗದು. ಅದನ್ನು ವಿಭಜಿಸುವ ಮೂಲಕ ಅಣುಶಕ್ತಿ ಉತ್ಪಾದಿಸಬಹುದು"
"ಸುಶ್ರುತ ಶಸ್ತ್ರಚಿಕಿತ್ಸೆಯ ಜನಕ. ಆತ 300ಕ್ಕೂ ಅಧಿಕ ಶಸ್ತ್ರಚಿಕಿತ್ಸಾ ವಿಧಾನಗಳನ್ನು ಹಾಗೂ ಶಸ್ತ್ರಚಿಕಿತ್ಸೆ ಬಳಿಕದ ಹೊಲಿಗೆ ಸೂತ್ರವನ್ನೂ ಹೇಳಿದ್ದ. ಇರುವೆಗಳ ತಲೆಯನ್ನು ಕೂಡಾ ಹೊಲಿಗೆ ಮಾಡುವ ವಿಧಾನವನ್ನು ವಿವರಿಸಿದ್ದ"
ಆರೆಸ್ಸೆಸ್ ಸಹ ಸಂಘಟನೆ ಮತ್ತು ವಿಜ್ಞಾನ ಹಾಗೂ ತಂತ್ರಜ್ಞಾನ ಘಟಕವಾಗಿರುವ ವಿಜ್ಞಾನ ಭಾರತಿ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಲು ನೀಡಿದ ಅಧ್ಯಯನ ಆಕರಗಳ ಕೆಲ ಸ್ಯಾಂಪಲ್ ಇದು. ದೇಶಾದ್ಯಂತ ನವೆಂಬರ್ 20ರಂದು 2000 ಸರಕಾರಿ ಹಾಗೂ ಖಾಸಗಿ ಶಾಲೆಗಳಲ್ಲಿ ಈ ಪರೀಕ್ಷೆ ನಡೆಸಲು ವಿಜ್ಞಾನ ಭಾರತಿ ನಿರ್ಧರಿಸಿದ್ದು, ಆರರಿಂದ 11ನೇ ತರಗತಿಯ ಸುಮಾರು 1.4 ಲಕ್ಷ ಮಕ್ಕಳು ಇದರಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. 'ವಿಜ್ಞಾನಕ್ಕೆ ಭಾರತದ ಕೊಡುಗೆ' ಎಂಬ ವಿಷಯದ ಬಗ್ಗೆ ಮತ್ತು ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರ ಜೀವನದ ಬಗೆಗಿನ ಮೂರು ಗಂಟೆಗಳ ಪರೀಕ್ಷೆ ನಡೆಯಲಿದೆ.
ಪರೀಕ್ಷೆಯ ಪಠ್ಯಕ್ರಮವನ್ನು ವಿಜ್ಞಾನ ಭಾರತಿ ಸಿದ್ಧಪಡಿಸಿದ್ದು, ವಿದ್ಯಾರ್ಥಿಗಳ ಅಧ್ಯಯನಕ್ಕೆ ಎರಡು ಕಿರುಹೊತ್ತಗೆಗಳನ್ನು ಬಿಡುಗಡೆಗೊಳಿಸಿದೆ. ಡೆಲ್ಲಿ ಪಬ್ಲಿಕ್ ಸ್ಕೂಲ್, ಕೇಂದ್ರೀಯ ವಿದ್ಯಾಲಯ, ನವೋದಯ ವಿದ್ಯಾಲಯ, ಆಮಿಟಿ ಇಂಟರ್ನ್ಯಾಷನಲ್ಗಳ ಶಿಕ್ಷಕರು ಈ ಪರೀಕ್ಷೆಗಾಗಿ ವಿದ್ಯಾರ್ಥಿಗಳಿಗೆ ವಿಶೇಷ ತರಗತಿಗಳನ್ನು ನಡೆಸುವಂತೆ ಸೂಚಿಸಲಾಗಿದೆ.
ಈ ಹಿಂದೆ ಯಾವುದೇ ಖಾಸಗಿ ಸಂಘಟನೆ ಇಷ್ಟೊಂದು ಶಾಲೆಗಳನ್ನು ಒಟ್ಟುಸೇರಿಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಿಲ್ಲ. ಹೊರಗಿನವರೇ ಪಠ್ಯಕ್ರಮ ನಿರ್ಧರಿಸಿ, ಮೌಲ್ಯಮಾಪನವನ್ನೂ ಮಾಡುತ್ತಾರೆ. ಅಧ್ಯಯನಕ್ಕೆ ನೀಡಿರುವ ಮಾಹಿತಿಗಳು ಅತ್ಯುತ್ತಮ ಎಂದು ಶಿಕ್ಷಕರು ಹೇಳಿದ್ದಾರೆ.
ವಿಶ್ವದ ವಿಜ್ಞಾನ ಕ್ಷೇತ್ರದಲ್ಲಿ ಭಾರತೀಯರ ಸಾಧನೆ ಮತ್ತು ವಿಜ್ಞಾನದ ಬಗ್ಗೆ ಮಕ್ಕಳಲ್ಲಿ ಆಸಕ್ತಿ ಮೂಡಿಸುವುದು ಇದರ ಉದ್ದೇಶ ಎಂದು ವಿಜ್ಞಾನ ಭಾರತಿ ಪ್ರಧಾನ ಕಾರ್ಯದರ್ಶಿ ಹಾಗೂ ಹಿರಿಯ ಪ್ರಚಾರಕ ಎ.ಜಯಕುಮಾರ್ ಹೇಳಿದ್ದಾರೆ. ಇದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಾವು ಕೇವಲ ಶೂನ್ಯವನ್ನು ಕಂಡುಹಿಡಿದದ್ದಷ್ಟೇ ಅಲ್ಲ, ಅದಕ್ಕಿಂತ ಹೆಚ್ಚು ಸಾಧನೆ ಮಾಡಿದ್ದೇವೆ" ಎಂದು ವಿವರಿಸಿದ್ದಾರೆ. ಇದಕ್ಕೆ ಯಾವುದೇ ಸರಕಾರಿ ನೆರವು ಇಲ್ಲ. ಕಲಾಂ ಸ್ಫೂರ್ತಿದಾಯಕ ವ್ಯಕ್ತಿಯಾಗಿರುವುದರಿಂದ ಅವರ ಜೀವನ ಸಾಧನೆ ಬಗ್ಗೆಯೂ ಪರೀಕ್ಷೆ ಇದೆ ಎಂದು ಸ್ಪಷ್ಟಪಡಿಸಿದ್ದಾರೆ.
ಸ್ವದೇಶಿ ಸ್ಫೂರ್ತಿಯ ವಿಜ್ಞಾನ ಚಳವಳಿ ಎಂದು ಇದನ್ನು ವಿಜ್ಞಾನ ಭಾರತಿ ಬಣ್ಣಿಸಿದೆ. ವಿಜ್ಞಾನಿಗಳಾದ ಅನಿಲ್ ಕಾಕೋಡ್ಕರ್ ಹಾಗೂ ಜಿ.ಮಾಧವನ್ ನಾಯರ್ ಸೇರಿದಂತೆ ಹಲವರು ಇದರ ಆಡಳಿತ ಮಂಡಳಿಯಲ್ಲಿದ್ದಾರೆ.
ಈ ಪರೀಕ್ಷೆಯಲ್ಲಿ ಅತ್ಯುನ್ನತ ಅಂಕ ಗಳಿಸುವ ವಿದ್ಯಾರ್ಥಿಗಳು ರಾಜ್ಯ ಹಾಗೂ ರಾಷ್ಟ್ರಮಟ್ಟದ ಪರೀಕ್ಷೆಗೆ ಆಯ್ಕೆಯಾಗುವರು. ಅಂತಿಮ ವಿಜೇತರು ರಾಷ್ಟ್ರಪತಿಗಳಿಂದ ಪ್ರಶಸ್ತಿ ಸ್ವೀಕರಿಸುವರು.
ಆರ್ಯಭಟ, ವರಹಾಮೀರ, ಬ್ರಹ್ಮಗುಪ್ತ, ಲಲ್ಲಾ ಹಾಗೂ ಶ್ರೀಪತಿ ಅವರ ಬಗೆಗಿನ ಅಧ್ಯಾಯಗಳಿವೆ. ಆಯುವರ್ೇದದ ಬಗೆಗಿನ ಅಧ್ಯಾಯದಲ್ಲಿ, ವಿವಿಧ ಬಗೆಯ ತೈಲ ಅಭ್ಯಂಗಗಳ ವಿವರಗಳಿವೆ. ಒಂದು ಅಧ್ಯಾಯದಲ್ಲಿ ಇಸ್ರೊ ಸಾಧನೆ ಹಾಗೂ ಆಧುನಿಕ ವಿಜ್ಞಾನಿಗಳಾದ ವಿಕ್ರಮ್ ಸಾರಾಭಾಯ್, ವರ್ಗೀಸ್ ಕುರಿಯನ್, ಎಂ.ಎಸ್.ಸ್ವಾಮಿನಾಥನ್, ಅನಿಲ್ ಕಾಕೋಡ್ಕರ್, ಸ್ಯಾಮ್ ಪಿತ್ರೋಡಾ ಹಾಗೂ ಸಬೀರ್ ಭಾಟಿಯಾ ಬಗ್ಗೆ ವಿವರಗಳಿವೆ.







