ಇಂಗ್ಲೆಂಡ್ ತಂಡದಲ್ಲಿ ಮಿಂಚುತ್ತಿದ್ದಾರೆ ಭಾರತದ ಆಟಗಾರ!

ರಾಜ್‌ಕೋಟ್, ನ.13: ಮೇಲಿನ ಶೀರ್ಷಿಕೆ ನೋಡಿ ಗಾಬರಿಯಾಗಬೇಡಿ. ಇದು ಅಚ್ಚರಿಯಾದರೂ ಸತ್ಯ. ಇಂಗ್ಲೆಂಡ್‌ನ ಅತ್ಯಂತ ಕಿರಿಯ ಟೆಸ್ಟ್ ಆರಂಭಿಕ ಆಟಗಾರ ಹಸೀಬ್ ಹಮೀದ್ ಭಾರತದ ಮೂಲದವರಾಗಿದ್ದಾರೆ. ತನ್ನ ಚೊಚ್ಚಲ ಪಂದ್ಯದಲ್ಲೇ ಮಿಂಚುತ್ತಿರುವ 19ರ ಹರೆಯದ ಪ್ರತಿಭಾವಂತ ಆಟಗಾರ ಹಮೀದ್.
ಗುಜರಾತ್‌ನ ಸೂರತ್ ಜಿಲ್ಲೆಯ ಉಮ್ರಾಜ್‌ಹಳ್ಳಿಯ ದಂಪತಿಯ ಪುತ್ರನಾಗಿರುವ ಹಮೀದ್ ಜನಿಸಿದ್ದು ಇಂಗ್ಲೆಂಡ್‌ನಲ್ಲಿ. ಸ್ವತಃ ಕ್ರಿಕೆಟಿಗನಾಗಿರುವ ಹಮೀದ್ ತಂದೆ ಇಸ್ಮಾಯಿಲ್ ಮಗನ ಕ್ರಿಕೆಟ್ ಆಸಕ್ತಿಗೆ ನೀರೆರದರು.
ಐದು ವರ್ಷಗಳ ಹಿಂದೆ 14ರ ಹರೆಯದ ತನ್ನ ಮಗನಲ್ಲಿ ಬ್ಯಾಟಿಂಗ್ ಸಾಮರ್ಥ್ಯವನ್ನು ಗುರುತಿಸಿದ ಇಸ್ಮಾಯಿಲ್ ಮಗನನ್ನು ಮುಂಬೈಗೆ ಕಳುಹಿಸಿಕೊಡಲು ನಿರ್ಧರಿಸಿದ್ದರು. ಮುಂಬೈನ ಮಾಜಿ ಪೊಲೀಸ್ ಸಹಾಯಕ ಕಮಿಶನರ್, ಸ್ನೇಹಿತ ಇಕ್ಬಾಲ್ ಶೇಕ್‌ಗೆ ಕರೆ ಮಾಡಿದರು.
‘‘ನಾನು ಹಸೀಬ್‌ಗೆ ಮುಂಬೈಗೆ ಬರುವಂತೆ ಹೇಳಿದ್ದೆ. ದುರದೃಷ್ಟವಶಾತ್ ನಿಯಮಗಳ ಬದಲಾವಣೆಯಿಂದಾಗಿ ಹಸೀಬ್‌ಗೆ ಸ್ಥಳೀಯ ಕ್ರಿಕೆಟ್ ಟೂರ್ನಿ ಪೊಲೀಸ್ ಶೀಲ್ಡ್‌ನಲ್ಲಿ ಆಡಲು ಸಾಧ್ಯವಾಗಲಿಲ್ಲ. ಆತ ಸ್ಥಳೀಯ ಕ್ಲಬ್‌ಗಳಲ್ಲಿ ಆಡಿದ್ದ. ನಾನು ಕೋಚ್ ವಿದ್ಯಾ ಪರಾಡ್ಕರ್‌ಗೆ ಹಸೀಬ್‌ರನ್ನು ಪರಿಚಯಿಸಿಕೊಟ್ಟಿದ್ದೆ’’ ಎಂದು ಇಕ್ಬಾಲ್ ಶೇಕ್ ಹೇಳಿದ್ದಾರೆ.
ವಿದ್ಯಾ ಪರಾಡ್ಕರ್ ಭಾರತದ ವೇಗದ ಬೌಲರ್ ಝಹೀರ್‌ಖಾನ್ ಸಹಿತ ಹಲವು ಕ್ರಿಕೆಟಿಗರ ಭವಿಷ್ಯ ರೂಪಿಸಿದ್ದಾರೆ. ಹಮೀದ್ ತನ್ನ ತಂದೆಯ ತವರು ರಾಜ್ಯ ಗುಜರಾತ್‌ನ ರಾಜ್‌ಕೋಟ್‌ನಲ್ಲಿ ಇಂಗ್ಲೆಂಡ್‌ನ ಪರ ಆಡಿರುವ ಚೊಚ್ಚಲ ಪಂದ್ಯದಲ್ಲೇ ನಾಯಕ ಅಲೆಸ್ಟೈರ್ ಕುಕ್‌ರೊಂದಿಗೆ ಟೆಸ್ಟ್ ಇನಿಂಗ್ಸ್ ಆರಂಭಿಸುವ ಅಪೂರ್ವ ಅವಕಾಶ ಪಡೆದಿದ್ದರು. ಕುಕ್ ಕೂಡ ಭಾರತದಲ್ಲಿ ಚೊಚ್ಚಲ ಪಂದ್ಯ ಆಡಿದ್ದರು.
ಭಾರತ ವಿರುದ್ಧ ಪ್ರಥಮ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿ 31ರನ್ ಗಳಿಸಿದ್ದ ಹಮೀದ್ ಎರಡನೆ ಇನಿಂಗ್ಸ್‌ನಲ್ಲಿ ಅಜೇಯ 75 ರನ್ ಗಳಿಸಿ ಕ್ರೀಸ್ ಕಾಯ್ದುಕೊಂಡಿದ್ದಾರೆ. ಚೊಚ್ಚಲ ಶತಕದ ನಿರೀಕ್ಷೆಯಲ್ಲಿದ್ದಾರೆ.







