ಚೆಕ್‌ಗಳನ್ನು ಮಾತ್ರ ಬಳಸಿ ತಾನು ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಬಿಜೆಪಿ ಘೋಷಿಸಲಿ:ಖುರ್ಷಿದ್ ಸವಾಲು

ಝಿರಕ್‌ಪುರ(ಪಂಜಾಬ್),ನ.13: ಮೋದಿ ಸರಕಾರದ ವಿರುದ್ಧ ಟೀಕಾಪ್ರಹಾರ ನಡೆಸಿರುವ ಕಾಂಗ್ರೆಸ್ ನಾಯಕ ಸಲ್ಮಾನ್ ಖುರ್ಷಿದ್ ಅವರು, ಅದನ್ನು ಪ್ರಶ್ನಿಸುವವರನ್ನು ದೇಶದ್ರೋಹಿಗಳು ಅಥವಾ ಹೊಣೆಗೇಡಿಗಳೆಂದು ಹಣೆಪಟ್ಟಿ ಕಟ್ಟಲಾಗುತ್ತದೆ ಎಂದು ಆರೋಪಿಸಿದ್ದಾರೆ. ಕಪ್ಪುಹಣದ ವಿರುದ್ಧ ತನ್ನ ಹೋರಾಟದ ಬಗ್ಗೆ ಬಿಜೆಪಿಯು ಗಂಭೀರ ನಿಲುವು ಹೊಂದಿದ್ದರೆ ಅದು ತಾನು ಚೆಕ್‌ಗಳನ್ನು ಮಾತ್ರ ಬಳಸಿ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಘೋಷಿಸಬೇಕು ಎಂದು ಅವರು ಇದೇ ವೇಳೆ ಸವಾಲು ಹಾಕಿದ್ದಾರೆ.
ಶನಿವಾರ ಇಲ್ಲಿಯ ಖಾಸಗಿ ಶಾಲೆಯೊಂದರ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಅವರು, ಹೊರಗಿನಿಂದ ದೇಶದೊಳಗೆ ನುಸುಳುತ್ತಿರುವ ಖೋಟಾ ನೋಟುಗಳ ಬಗ್ಗೆಯೂ ಕೇಂದ್ರ ಸರಕಾರವು ಗಮನ ಹರಿಸಬೇಕು. ಈವರೆಗೆ ವಶಪಡಿಸಿಕೊಳ್ಳಲಾಗಿರುವ ಖೋಟಾ ನೋಟುಗಳ ಮೊತ್ತವನ್ನು ಅದು ಬಹಿರಂಗಗೊಳಿಸಬೇಕು. ಮುಂದಿನ ಚುವಾವಣೆಯಲ್ಲಿ ತಾನು ಚೆಕ್‌ಗಳನ್ನು ಮಾತ್ರ ಬಳಸುವುದಾಗಿ ಬಿಜೆಪಿ ಹೇಳಿದರೆ ಕಪ್ಪುಹಣವನ್ನು ಸಂಪೂರ್ಣವಾಗಿ ನಿರ್ಮೂಲನ ಮಾಡಲಾಗಿದೆ ಎನ್ನುವುದನ್ನು ತಾನು ಒಪ್ಪಿಕೊಳ್ಳುತ್ತೇನೆ ಎಂದರು.





