ಕಾರ್ಡ್‌ಗಳ ಮೂಲಕ ವ್ಯವಹಾರ ಮಾಡಿ: ಬೆಳಗಾವಿಯಲ್ಲಿ ಪ್ರಧಾನಿ ಮೋದಿ ಕರೆ

ಬೆಳಗಾವಿ, ನ.13: ‘‘ಕ್ರೆಡಿಟ್‌ಕಾರ್ಡ್, ಡೆಬಿಟ್ ಕಾರ್ಡ್‌ನ ಮೂಲಕ ವ್ಯವಹಾರ ನಡೆಯಬೇಕು. ಇನ್ನು ಮುಂದೆ ನಗದು ವ್ಯವಹಾರ ನಿಧಾನವಾಗಿ ನಿಲ್ಲಬೇಕಾಗಿದೆ. ಜನಧನ್ ಯೋಜನೆಯ ಮೂಲಕ ಎಲ್ಲರಿಗೂ ಕಾರ್ಡ್‌ಗಳನ್ನು ವಿತರಿಸಲಾಗಿದೆ. ಭ್ರಷ್ಟಾಚಾರ ಭಾರತದ 70 ವರ್ಷಗಳ ರೋಗವಾಗಿದೆ. ಗಂಗಾನದಿಯಲ್ಲಿ ನಾಣ್ಯ ಹಾಕುತ್ತಿರಲಿಲ್ಲ. ಈಗ ಕಂತೆ-ಕಂತೆ ನೋಟುಗಳನ್ನು ಹಾಕುತ್ತಿದ್ದಾರೆ. ನಮ್ಮ ನಿರ್ಧಾರದಿಂದ ಕೆಲವರಿಗೆ ನೋವಿದೆ. ಅದರಿಂದ ಎಲ್ಲರಿಗೂ ಅಷ್ಟೇ ಪ್ರಯೋಜನವಿದೆ’’ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.
ಕೆಎಲ್‌ಇ ಸಂಸ್ಥೆಯ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕುಂದಾನಗರಿಗೆ ಆಗಮಿಸಿದ್ದು, ರವಿವಾರ ಜಿಲ್ಲಾ ಕ್ರೀಡಾಂಗಣದಲ್ಲಿ ಸಭಿಕರನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.
ಕನ್ನಡದಲ್ಲಿ ಭಾಷಣ ಆರಂಭಿಸಿದ ಮೋದಿ, ಕೆಲವು ವರ್ಷಗಳ ಹಿಂದೆ ಕಲ್ಲಿದ್ದಲು ಹಗರಣ, ಸಹಿತ ಹಲವು ಹಗರಣದಲ್ಲಿ ಸುದ್ದಿಯಾಗಿದ್ದವರು ಈಗ 4,000 ರೂ.ಗೆ ಕ್ಯೂನಲ್ಲಿ ನಿಲ್ಲುವಂತಾಗಿದೆ. ನಮಗೆ ಹೊಸ ನೋಟಿನ ಗೌಪ್ಯತೆ ಕಾಪಾಡುವುದು ಅನಿವಾರ್ಯವಾಗಿತ್ತು. ಸರಕಾರ ಪ್ರಾಮಾಣಿಕರ ರಕ್ಷಣೆಯಲ್ಲಿ ತೊಡಗಿದೆ’’ ಎಂದು ಪ್ರಧಾನಿ ಮೋದಿ ಕಾಂಗ್ರೆಸ್‌ನ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.
‘‘ಒಂದು ಸಂಸ್ಥೆಯನ್ನು 100 ವರ್ಷ ನಡೆಸುವುದು ಸುಲಭ ಸಾಧ್ಯವಲ್ಲ. ಈ ಸಂಸ್ಥೆಯಲ್ಲಿ 1,25,000 ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದು, ಇವರು ಮುಂದಿನ 2020 ಒಲಿಂಪಿಕ್ಸ್‌ನಲ್ಲಿ ದೇಶಕ್ಕೆ ಚಿನ್ನದ ಪದಕವನ್ನು ಜಯಿಸುವ ಪ್ರಯತ್ನ ಮಾಡಬೇಕು. ವಿಜ್ಞಾನಿ-ತಂತ್ರಜ್ಞಾನಿಗಳನ್ನು ಸೃಷ್ಟಿಸುತ್ತಿರುವ ಕೆಎಲ್‌ಇ ಸಂಸ್ಥೆ ಅಭಿವೃದ್ದಿಯ ನಿಟ್ಟಿನಲ್ಲಿ ಇನ್ನಷ್ಟು ಕೊಡುಗೆ ನೀಡಬೇಕು’’ ಎಂದು ಮೋದಿ ಸಲಹೆ ನೀಡಿದರು.







