ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕರೆ ನೀಡಿಲ್ಲ: ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ ಸ್ಪಷ್ಟನೆ
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ 6 ದಿನಗಳ ಮುಷ್ಕರದ ವದಂತಿ ಸುಳ್ಳು

ಹೊಸದಿಲ್ಲಿ, ನ.13: ಇತ್ತೀಚೆಗೆ ಕೇಂದ್ರ ಸರಕಾರ 500 ಹಾಗೂ 1000 ರೂ.ಮುಖಬೆಲೆಯ ಕರೆನ್ಸಿ ನೋಟನ್ನು ರದ್ಧುಪಡಿಸಿರುವ ಕ್ರಮವನ್ನು ವಿರೋಧಿಸಿ ರಾಷ್ಟ್ರಾದ್ಯಂತ ಆರು ದಿನಗಳ ಕಾಲ ಮುಷ್ಕರಕ್ಕೆ ಕರೆ ನೀಡಲಾಗಿದೆ ಎಂಬ ವದಂತಿಯನ್ನು ನಿರಾಕರಿಸಿರುವ ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ(ಸಿಎಐಟಿ), ಈಗಿನ ಪರಿಸ್ಥಿತಿಯ ಬಗ್ಗೆ ಚರ್ಚಿಸಲು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಅವರನ್ನು ಭೇಟಿಯಾಗುವ ನಿರೀಕ್ಷೆಯಲ್ಲಿದ್ದೇವೆ ಎಂದು ಅದು ಹೇಳಿದೆ.
‘‘ನಾವು ಆರು ದಿನಗಳ ಕಾಲ ದೇಶಾದ್ಯಂತ ಮುಷ್ಕರಕ್ಕೆ ಕರೆ ನೀಡಿದ್ದೇವೆ ಎಂಬ ವ್ಯಾಟ್ಸ್‌ಆಪ್‌ನಲ್ಲಿ ಸಂದೇಶಗಳು ಹರಿದಾಡುತ್ತಿರುವ ಬಗ್ಗೆ ಮಾಹಿತಿ ಲಭಿಸಿದೆ. ನಾವು ಇಂತಹ ಸಂದೇಶವನ್ನು ಬಲವಾಗಿ ನಿರಾಕರಿಸುತ್ತಿದ್ದೇವೆ. ನಾವು ಇಂತಹ ಮುಷ್ಕರಕ್ಕೆ ಕರೆ ನೀಡಿಲ್ಲ ಎಂದು ತಿಳಿಸಲು ಬಯಸುತ್ತೇವೆ. ಈಗಿನ ಮಾರುಕಟ್ಟೆ ಪರಿಸ್ಥಿತಿಯ ಬಗ್ಗೆ ಚರ್ಚಿಸಲು ವಿತ್ತ ಸಚಿವರ ಭೇಟಿಯ ನಿರೀಕ್ಷೆಯಲ್ಲಿದ್ದೇವೆ. ಈಗಿನ ಸನ್ನಿವೇಶವನ್ನು ಸರಿಪಡಿಸಲು ಡಿಜಿಟಲ್ ಪಾವತಿ ಹೆಚ್ಚಿಸಬೇಕೆಂಬ ಬಗ್ಗೆ ಒತ್ತಾಯಿಸಲಿದ್ದೇವೆ’’ ಎಂದು ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಖಂಡೆಲ್‌ವಾಲ್ ಹೇಳಿದ್ದಾರೆ.
ಕೇಂದ್ರದ ಗರಿಷ್ಠ ವೌಲ್ಯದ ನೋಟನ್ನು ನಿಷೇಧಿಸಿರುವ ಹೆಜ್ಜೆಯನ್ನು ಸ್ವಾಗತಿಸಿರುವ ಭಾರತೀಯ ಕೈಗಾರಿಕೆಗಳ ಒಕ್ಕೂಟದ ಪ್ರಧಾನ ನಿರ್ದೇಶಕ ಚಂದ್ರಜಿತ್ ಮುಖರ್ಜಿ,‘‘ದಿಢೀರನೆ ನಗದು ವ್ಯವಹಾರವನ್ನು ಹಿಂದಕ್ಕೆ ಪಡೆದಿರುವ ಕಾರಣ ಕೆಲವು ದಿನಗಳವರೆಗೆ ಸಮಸ್ಯೆಯಾದರೂ ನಿಧಾನವಾಗಿ ಸರಿಯಾಗಲಿದೆ. ದೇಶದ ಆರ್ಥಿಕ ಪರಿಸ್ಥಿತಿಯಲ್ಲೂ ಸುಧಾರಣೆಯಾಗುವ ವಿಶ್ವಾಸವಿದೆ. ಭಾರತ ಇತರ ದೇಶಗಳಿಗಿಂತ ಹೆಚ್ಚಾಗಿ ನಗದು ವ್ಯವಹಾರಕ್ಕೆ ಕರೆನ್ಸಿಯನ್ನು ಅವಲಂಭಿಸಿದೆ’’ ಎಂದು ಹೇಳಿದರು.







