ಶರ್ಬತ್ ಗುಲಾಗೆ ಭಾರತದಲ್ಲಿ ಉಚಿತ ವೈದ್ಯಕೀಯ ಚಿಕಿತ್ಸೆ

ಹೊಸದಿಲ್ಲಿ,ನ.13: ಕೆಲವು ದಿನಗಳ ಹಿಂದಷ್ಟೇ ಪಾಕಿಸ್ತಾನದಿಂದ ಗಡೀಪಾರು ಗೊಂಡಿರುವ,ನಿರಾಶ್ರಿತರ ಹೋರಾಟದ ದ್ಯೋತಕವಾಗಿರುವ ಹಸಿರುಗಣ್ಣಿನ ಅಫಘಾನಿ ಸ್ತಾನದ ಶರ್ಬತ್ ಗುಲಾ ವೈದ್ಯಕೀಯ ಚಿಕಿತ್ಸೆಗಾಗಿ ಶೀಘ್ರವೇ ಭಾರತಕ್ಕೆ ಆಗಮಿಸಲಿದ್ದಾರೆ.
1984ರಲ್ಲಿ ನ್ಯಾಷನಲ್ ಜಿಯಾಗ್ರಾಫಿಕ್ ಮ್ಯಾಗಝಿನ್‌ನಲ್ಲಿ ತನ್ನ ಭಾವಚಿತ್ರ ಪ್ರಕಟಗೊಂಡ ನಂತರ ಗುಲಾ ವಿಶ್ವಖ್ಯಾತಿಗೆ ಪಾತ್ರರಾಗಿದ್ದರು. ನಕಲಿ ಗುರುತಿನ ದಾಖಲೆಗಳನ್ನು ಹೊಂದಿದ್ದ ಆರೋಪದಲ್ಲಿ ಬುಧವಾರ ಅವರನ್ನು ಪಾಕಿಸ್ತಾನದಿಂದ ಅಫಘಾನಿಸ್ತಾನಕ್ಕೆ ಗಡೀಪಾರು ಮಾಡಲಾಗಿದೆ. ಹೆಪಟೈಟಿಸ್ ಸಿ ಮತ್ತು ಇತರ ಕೆಲವು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವ ಗುಲಾ ಅವರಿಗೆ ಉಚಿತ ವೈದ್ಯಕೀಯ ಚಿಕಿತ್ಸೆಯ ಕೊಡುಗೆಯನ್ನು ಭಾರತವು ಮುಂದಿರಿಸಿದ್ದು, ಇದಕ್ಕಾಗಿ ಕೃತಜ್ಞತೆಗಳನ್ನು ವ್ಯಕ್ತಪಡಿಸಿ ಅಫಘಾನಿಸ್ತಾನದ ರಾಯಭಾರಿ ಶೈದಾ ಅಬ್ದಾಲಿ ರವಿವಾರ ಟ್ವೀಟ್ ಮಾಡಿದ್ದಾರೆ.
‘ಅಫಘಾನಿ ಬಾಲೆ ’ ಎಂದೇ ಜನಪ್ರಿಯರಾಗಿರುವ ಗುಲಾ ಎಳೆಯ ವಯಸ್ಸಿನಲ್ಲಿಯೇ ತಾಯ್ನಿಡಿನಿಂದ ಪರಾರಿಯಾಗಿದ್ದರು. ಪಾಕಿಸ್ತಾನದಲ್ಲಿ ದಶಕಗಳ ಕಾಲ ನಿರಾಶ್ರಿತಳಾಗಿ ಬದುಕು ಸವೆಸಿದ್ದ ಅವರನ್ನು ನಕಲಿ ಗುರುತಿನ ದಾಖಲೆಗಳನ್ನು ಹೊಂದಿದ್ದ ಆರೋಪದಲ್ಲಿ ಬಂಧಿಸಲಾಗಿತ್ತು. ಮೂವರು ಮಕ್ಕಳ ತಾಯಿಯಾಗಿರುವ ಗುಲಾ ಬೆಂಗಳೂರಿನ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯಲಿದ್ದಾರೆ ಎನ್ನಲಾಗಿದೆ. ಪ್ರಶಸ್ತಿ ವಿಜೇತ ಛಾಯಾಗ್ರಾಹಕ ಸ್ಟೀವ್ ಮೆಕ್‌ಕ್ಯೂರಿ ಅವರು ಸೆರೆ ಹಿಡಿದಿದ್ದ ಮಿಂಚುವ ಹಸಿರು ಕಣ್ಣುಗಳ ಗುಲಾ ಚಿತ್ರವು ಅವರನ್ನು ಅಫಘಾನಿಸ್ತಾನದಲ್ಲಿಯ ನಿರಾಶ್ರಿತರ ಬಿಕ್ಕಟ್ಟಿನ ಪ್ರತೀಕವನ್ನಾಗಿಸಿತ್ತು.
ಗುಲಾರನ್ನು ಗಡೀಪಾರು ಮಾಡಿದ್ದಕ್ಕಾಗಿ ಪಾಕಿಸ್ತಾನದ ವಿರುದ್ಧ ವ್ಯಾಪಕ ಟೀಕೆಗಳು ವ್ಯಕ್ತವಾಗಿವೆ.







